Kiren Rijiju | ದಿಮಾಗಿ ನಕ್ಸಲ್ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ರಿಜಿಜು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದಿಮಾಗಿ ನಕ್ಸಲರು (ಬೌದ್ದಿಕ ನಕ್ಸಲರು) ಎಂದು ಹೇಳಿರುವುದು ವಿರೋಧ ಪಕ್ಷದ ನಾಯಕರನ್ನಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಹೇಳಿಕೆಯನ್ನು ಟೀಕಿಸಿದ ಬೆನ್ನಲ್ಲೇ ರಿಜಿಜು ಈ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿರಣ್ ರಿಜಿಜು, ಪ್ರಧಾನಿ ಮೋದಿ ಅವರು ದಿಮಾಗಿ ನಕ್ಸಲರು ಎಂದು ಕರೆದಿರುವುದು ಕೇವಲ ಮಾವೋವಾದಿಗಳನ್ನು ಬೆಂಬಲಿಸುವ ಮತ್ತು ಭಾರತದ ಸಂವಿಧಾನವನ್ನು ನಿರಾಕರಿಸುವವರನ್ನು, ಪ್ರತ್ಯೇಕತಾವಾದಿಗಳ ಪರ ನಿಂತು ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರನ್ನು ಹಾಗೂ ಭಾರತದ ಈಶಾನ್ಯ ರಾಜ್ಯಗಳನ್ನು ಉಳಿದ ಭಾಗದಿಂದ ಪ್ರತ್ಯೇಕಿಸಲು ಚಿಕನ್ಸ್ ನೆಕ್ ಅನ್ನು ಕತ್ತರಿಸಲು ಕರೆ ನೀಡುವವರನ್ನು ಮಾತ್ರ ಎಂದು ವಿವರಿಸಿದ್ದಾರೆ. ಇಲ್ಲಿ ಚಿಕನ್ಸ್ ನೆಕ್ ಎಂಬುದು ಪಶ್ಚಿಮ ಬಂಗಾಳದಲ್ಲಿರುವ 22 ಕಿಲೋಮೀಟರ್ ಅಗಲದ ಕಿರಿದಾದ ಭೂಪ್ರದೇಶವಾಗಿದ್ದು, ಇದು ಭಾರತದ ಮೂಲಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ.
ನಿನ್ನೆ ನಡೆದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ದೇಶದಲ್ಲಿ ಮಾವೋವಾದಿಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದ್ದಕ್ಕಾಗಿ ಜನತೆಯನ್ನು ಅಭಿನಂದಿಸಿದ್ದರು ಮತ್ತು ಸಾವಿರಾರು ಭದ್ರತಾ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿದ್ದರು. ಕಾಡಿನಲ್ಲಿ ಶಸ್ತ್ರಾಸ್ತ್ರ ಹಿಡಿದಿದ್ದ ಮಾವೋವಾದಿಗಳನ್ನು ಸಂಪೂರ್ಣವಾಗಿ ಮಟ್ಟಹಾಕಲಾಗಿದ್ದರೂ, ಸಮಾಜದಲ್ಲಿ ದಿಮಾಗಿ ನಕ್ಸಲರು ಇನ್ನೂ ಇದ್ದಾರೆ. ದೇಶವು ಮುನ್ನಡೆಯಲು ಅಂತಹವರನ್ನು ಗುರುತಿಸಿ ಪ್ರತ್ಯೇಕಿಸಬೇಕಾಗಿದೆ ಎಂದಿದ್ದರು.
ಪ್ರಧಾನಿ ಮೋದಿ ಹೇಳಿದ್ದೇನು...?
ವರ್ಷಗಳಿಂದ ಮಾವೋವಾದಿ ಚಿಂತನೆ ಉಳ್ಳವರು ಸಾರ್ವಜನಿಕ ಜೀವನದಲ್ಲಿ ಮತ್ತು ಸರ್ಕಾರಿ ಸಮಿತಿಗಳಲ್ಲೂ ಇದ್ದರು, ಈ ಆಲೋಚನೆಯು ವಿವಿಧ ಸಂಸ್ಥೆಗಳು ಮತ್ತು ಉಪಕ್ರಮಗಳ ಮೇಲೆ ಪರಿಣಾಮ ಬೀರಿತ್ತು. ದೇಶವನ್ನು ಹಥಿಯಾರಿಯಾ ನಕ್ಸಲ್ (ಸಶಸ್ತ್ರ ನಕ್ಸಲರು) ನಿಂದ ಮುಕ್ತಗೊಳಿಸಲು ನಾವು ಯಶಸ್ವಿಯಾಗಿದ್ದೇವೆ. ಶಸ್ತ್ರ ಹಿಡಿದ ನಕ್ಸಲರು ಇಲ್ಲದಂತಾಗಿದ್ದರೂ, ಈ ದಿಮಾಗಿ ನಕ್ಸಲರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಹಿಂಸಾಚಾರದ ಮಾರ್ಗಗಳನ್ನು ಹುಡುಕುತ್ತಾ ದೇಶವನ್ನು ತಪ್ಪು ಹಾದಿಗೆಳೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಇಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ತಾವು ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಚಿದಂಬರಂ ಹೇಳಿಕೆ ನೀಡಿದ್ದರು(ಏಜೆನ್ಸೀಸ್).