Delimitation Row | 2029ಕ್ಕೇ ಮಹಿಳಾ ಕೋಟಾ ಜಾರಿಗೆ ರಿಜಿಜು ಮಾಸ್ಟರ್ ಪ್ಲಾನ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಶೀಘ್ರ ಕ್ಷೇತ್ರ ಪುನರ್ವಿಂಗಡಣೆ (Delimitation) ಪ್ರಕ್ರಿಯೆ ಅಗತ್ಯ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದು, ಈ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರೊಂದಿಗೆ ಹೊಸ ವಾಗ್ವಾದ ಆರಂಭವಾಗಿದೆ.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಲಿಂಕ್ ಮಾಡುವ ಕೇಂದ್ರ ಸರ್ಕಾರದ ನಡೆಯನ್ನು ರಾಹುಲ್ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ರಿಜಿಜು, 106ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2023ರ ನಿಬಂಧನೆಗಳನ್ನು ವಿವರಿಸಿದರು. 2029ರ ಸಾರ್ವತ್ರಿಕ ಚುನಾವಣೆಯಿಂದ ಕೋಟಾವನ್ನು ಜಾರಿಗೊಳಿಸಬೇಕಾದರೆ ಲಭ್ಯವಿರುವ ಇತ್ತೀಚಿನ ಜನಗಣತಿ ಅಂಕಿ-ಅಂಶಗಳನ್ನು ಬಳಸಬೇಕಾಗುತ್ತದೆ ಎಂದು ವಾದಿಸಿದರು.
ಆದಾಗ್ಯೂ, ಮಹಿಳಾ ಮೀಸಲಾತಿ ಮಸೂದೆಯನ್ನು 2023ರಲ್ಲಿಯೇ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ರಾಹುಲ್ ಪ್ರತಿಪಾದಿಸಿದ್ದು, ಈಗ ಅದರ ಅನುಷ್ಠಾನವನ್ನು ಕ್ಷೇತ್ರ ಪುನರ್ವಿಂಗಡಣೆಗೆ ಏಕೆ ಜೋಡಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
2029ರ ಕೋಟಾಗೆ ಕ್ಷೇತ್ರ ಪುನರ್ವಿಂಗಡಣೆ ಏಕೆ..? : ರಿಜಿಜು ವಿವರಣೆ ಹೀಗಿದೆ
ರಾಹುಲ್ ಗಾಂಧಿಯವರಿಗೆ ಎಕ್ಸ್ ಪೋಸ್ಟ್ ಮೂಲಕ ಉತ್ತರಿಸಿರುವ ಕಿರಣ್ ರಿಜಿಜು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ನಿಬಂಧನೆಯನ್ನು ನಾರಿ ಶಕ್ತಿ ವಂದನ್ ಅಧಿನಿಯಮ ಎಂದು ಕರೆಯಲ್ಪಡುವ 106ನೇ ಸಂವಿಧಾನ ತಿದ್ದುಪಡಿ ಕಾಯ್ದೆ-2023ರ ಅಡಿಯಲ್ಲಿ ಈಗಾಗಲೇ ಕಲ್ಪಿಸಲಾಗಿದೆ. ಆದರೆ, 2023ರ ನಂತರ ಅಂದರೆ 2026ರ ಬಳಿಕ ಪ್ರಕಟವಾಗುವ ನೂತನ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಈ ಮೀಸಲಾತಿ ಜಾರಿಗೆ ಬರಲಿದೆ ಎನ್ನುವುದನ್ನು ಈ ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ತಿಳಿಸಿದರು.
ಮುಂಬರುವ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕಾದರೆ, ಪ್ರಕಟಿತ ಲಭ್ಯವಿರುವ ಇತ್ತೀಚಿನ ಜನಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ಶೀಘ್ರದಲ್ಲಿಯೇ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ವಾದಿಸಿದರು.
ಮಸೂದೆಯ ಸೋಲನ್ನು ಉಲ್ಲೇಖಿಸಿದ ರಿಜಿಜು
ಸಂವಿಧಾನ ತಿದ್ದುಪಡಿಗಳ ಜೊತೆಗೆ ಲೋಕಸಭೆಯಲ್ಲಿ ಮಂಡಿಸಲಾದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ 2026ರ ಅಡಿಯಲ್ಲಿ ಅನುಷ್ಠಾನದ ವಿಧಾನವನ್ನು ಪ್ರಸ್ತಾಪಿಸಲಾಗಿತ್ತು ಎಂದು ರಿಜಿಜು ಹೇಳಿದರು. ಈ ಉದ್ದೇಶಕ್ಕಾಗಿ ತರಲಾಗಿದ್ದ 131ನೇ ಸಂವಿಧಾನ ತಿದ್ದುಪಡಿ ಮಸೂದೆ 2026 ಸೋತಿದೆ ಎಂದು ಈ ವೇಳೆ ತಿಳಿಸಿದರು. ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಲಿಂಕ್ ಮಾಡುವ ಕೇಂದ್ರದ ನಿರ್ಧಾರವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ ನಂತರ ಅವರ ಈ ಹೇಳಿಕೆಗಳು ಬಂದಿವೆ.
ರಿಜಿಜು ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲದೊಂದಿಗೆ ಈಗಾಗಲೇ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು. ಮೂರು ವರ್ಷಗಳ ನಂತರವೂ ಈ ಶಾಸನವನ್ನು ಏಕಾಗಿ ಇನ್ನೂ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ರಾಹುಲ್, ಈಗ ಅದನ್ನು ಕ್ಷೇತ್ರ ಪುನರ್ವಿಂಗಡಣೆಗೆ ಅನಗತ್ಯವಾಗಿ ಲಿಂಕ್ ಮಾಡಲು ಬಯಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
2023ರ ಕಾನೂನನ್ನು ಜಾರಿಗೆ ತನ್ನಿ!..
2023ರಲ್ಲಿ ಸಂಸತ್ತು ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಅನುಮೋದನೆ ನೀಡಿ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಖಾತರಿಪಡಿಸಿತು. ಆದರೆ, ಈ ಕಾಯ್ದೆಯು ಹೊಸ ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ನಡೆದ ಮೇಲಷ್ಟೇ ಜಾರಿಗೆ ಬರಲಿದೆ ಎಂಬ ನಿಯಮವನ್ನು ಹೊಂದಿದೆ. ಮುಂಬರುವ 2029ರ ಲೋಕಸಭಾ ಚುನಾವಣೆಯ ಒಳಗಾಗಿಯೇ ಈ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆಗೆ ತರಾತುರಿ ನಡೆಸುತ್ತಿರುವುದು, ಈ ವಿಷಯವನ್ನು ರಾಜಕೀಯ ಜಟಾಪಟಿಯ ಕೇಂದ್ರಬಿಂದುವನ್ನಾಗಿ ಮಾಡಿದೆ.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 543 ರಿಂದ 850 ಕ್ಕೆ ಹೆಚ್ಚಿಸಲಿದ್ದು, ಶೇ. 33 ರಷ್ಟು ಅಂದರೆ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. 2011ರ ಜನಗಣತಿಯನ್ನು ಬಳಸಿ ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆ ಮಾಡುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಇದು ಅನುಕೂಲಕರವಾಗಿ, ದಕ್ಷಿಣ ಭಾರತದ ರಾಜ್ಯಗಳಿಗೆ ಹಿನ್ನಡೆಯಾಗಬಹುದು ಎಂದು ವಾದಿಸಿವೆ.
ಕೇಂದ್ರ-ವಿಪಕ್ಷಗಳ ನಡುವೆ ಮುಂದುವರಿದ ಕದನ
ಜುಲೈ 20 ರಿಂದ ಮುಂಗಾರು ಅಧಿವೇಶನವು ಜಟಾಪಟಿಗೆ ಸಿಲುಕಿ ಸ್ಥಗಿತಗೊಂಡಿದ್ದು, ಸಂಸತ್ತಿನಲ್ಲಿ ಈ ವಿಷಯವು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿರುವುದರಿಂದ, ಶಾಸನವನ್ನು ಅಂಗೀಕರಿಸಲು ಸರ್ಕಾರಕ್ಕೆ ವಿಪಕ್ಷಗಳ ಬೆಂಬಲ ಅಗತ್ಯವಿದೆ. ಕ್ಷೇತ್ರ ಪುನರ್ವಿಂಗಡಣೆಗೆ ಜೋಡಿಸಲಾದ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ತಿದ್ದುಪಡಿ ಮಾಡಲಾದ ಎಫ್‌ಸಿಆರ್‌ಎ (FCRA) ಮಸೂದೆಗೆ ಬೆಂಬಲ ಕೋರಲು ರಿಜಿಜು ಅವರು ಆಗಸ್ಟ್ 5 ರಂದು ರಾಹುಲ್ ಗಾಂಧಿ ಅವರೊಂದಿಗೆ 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ರಿಜಿಜು ಅವರು ಆಗಸ್ಟ್ 6 ರಂದು ರಾಹುಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ ಎಂದೂ ತಿಳಿದುಬಂದಿದೆ.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆಗೆ ಲಿಂಕ್ ಮಾಡುವುದು ವಿರೋಧ ಪಕ್ಷಕ್ಕೆ ಸ್ವೀಕಾರಾರ್ಹವಲ್ಲ ಎಂದು ರಾಹುಲ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ನಿಲುವನ್ನು ತಿಳಿಸುವ ಮೊದಲು ಕಾಂಗ್ರೆಸ್ ಈ ವಿಷಯವನ್ನು ಆಂತರಿಕವಾಗಿ ಮತ್ತು ತನ್ನ ಇಂಡಿಯಾ ಒಕ್ಕೂಟದ ಪಾಲುದಾರರೊಂದಿಗೆ ಚರ್ಚಿಸಲಿದೆ ಎಂದು ಅವರು ಹೇಳಿದ್ದಾರೆ(ಏಜೆನ್ಸೀಸ್).