ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು
ನವದೆಹಲಿ: ಸಂಸತ್ನ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಮತ್ತು ಡಿಲಿಮಿಟೇಷನ್, ಮಹಿಳಾ ಮೀಸಲಾತಿ ಬಿಲ್ಗೆ ಸಹಕರಿಸುವಂತೆ ಕೋರಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು, ಇಂದು(ಆ. 05) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಲೋಕಸಭೆ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಿಪಕ್ಷಗಳ ಗದ್ದಲದ ಕಾರಣದಿಂದ ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ ಬಳಿಕ ರಾಹುಲ್ ಗಾಂಧಿಯವರ ಕೊಠಡಿಗೆ ಕಿರಣ್ ರಿಜಿಜು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರ ಮಾತುಕತೆಯಲ್ಲಿ, ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ತರಲು ಉತ್ಸುಕವಾಗಿರುವ ಡಿಲಿಮಿಟೇಶನ್ ಮಸೂದೆ ಮತ್ತು ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲು ಮತ್ತು ಸದನ ಯಾವುದೇ ಗಲಾಟೆಯಿಲ್ಲದಂತೆ ನಡೆಯಲು ಸಕರಿಸುವಂತೆ ಕೋರಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ಎಲ್ಲವನ್ನೂ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಕಳ್ಳತನದ ಕುರಿತು ಚರ್ಚೆ ಮತ್ತು ಜುಲೈ 20 ರಂದು ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವವರೆಗೆ ಸದನದಲ್ಲಿ ಯಾವುದೇ ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ರಾಹುಲ್ ಗಾಂಧಿ ಭೇಟಿ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಗೃಹ ಸಚಿವರನ್ನು ಭೇಟಿಯಾದ ಕಿರಣ್ ರಿಜಿಜು, ಸಂಸತ್ತಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ. ಸಂಸತ್ನ ಮಳೆಗಾಲದ ಅಧಿವೇಶನ ಮೂರನೇ ವಾರಕ್ಕೆ ಕಾಲಿಟ್ಟರೂ ಉಭಯ ಸದನಗಳಲ್ಲಿ ವಿಪಕ್ಷಗಳ ಗದ್ದಲ ಮುಂದುವರೆದಿದೆ (ಏಜೆನ್ಸೀಸ್).