ನವದೆಹಲಿ: ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಮಾಜಿ ಹಣಕಾಸು ಸಚಿವ ಥಾಮಸ್ ಇಸಾಕ್ ಹಾಗೂ ಸಿಎಂ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ರಹಾಂ ಅವರಿಗೆ ಜಾರಿ ನಿರ್ದೇಶನಾಲಯವು(ED) 466 ಕೋಟಿ ರೂ.ಗಳ ಫೆಮಾ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಸೋಮವಾರ(ಡಿ. 01) ವರದಿಯಾಗಿದೆ.
ಖುದ್ದು ಹಾಜರಾತಿಯ ಅಗತ್ಯವಿಲ್ಲದ ಶೋಕಾಸ್ ನೋಟಿಸ್ ಅನ್ನು 10-12 ದಿನಗಳ ಹಿಂದೆಯೇ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)ಯ ನಿಬಂಧನೆಗಳ ಅಡಿಯಲ್ಲಿ ನೀಡಿದೆ ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಮಸಾಲಾ ಬಾಂಡ್‌ಗಳ ಮೂಲಕ ಕೆಐಐಎಫ್‌ಬಿ ಸಂಗ್ರಹಿಸಿದ 2,000 ಕೋಟಿ ರೂ.ಗಳ ಅಂತಿಮ ಬಳಕೆ ಮತ್ತು ಫೆಮಾ ಮಾನದಂಡಗಳ ಅನುಸರಣೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಕೆಐಐಎಫ್‌ಬಿ(ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ) ರಾಜ್ಯ ಸರ್ಕಾರದ ಪ್ರಮುಖ ಸಂಸ್ಥೆಯಾಗಿದ್ದು, ರಾಜ್ಯದಲ್ಲಿನ ದೊಡ್ಡ ಮತ್ತು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು 50,000 ಕೋಟಿ ರೂ.ಗಳನ್ನು ಕ್ರೋಢೀಕರಿಸುವ ಯೋಜನೆಯ ಭಾಗವಾಗಿ 2019ರಲ್ಲಿ ತನ್ನ ಚೊಚ್ಚಲ ಮಸಾಲಾ ಬಾಂಡ್ ವಿತರಣೆಯ ಮೂಲಕ 2,150 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು ಎನ್ನಲಾಗಿದೆ (ಏಜೆನ್ಸೀಸ್).