- ಆರು ವರ್ಷಗಳಲ್ಲಿ ಮೂರು ಮದುವೆಯಾಗಿದ್ದ ಭೂಪ
- ವರದಕ್ಷಿಗಾಗಿ ಕಿರುಕುಳ ನೀಡಿ ಮೂರು ಪತ್ನಿಯರನ್ನು ಮನೆಯಿಂದ ಹೊರಹಾಕಿದ್ದ ಕಿಲಾಡಿ
- ನಾಲ್ಕನೇ ಮದುವೆಗೆ ಸಜ್ಜಾದಾಗ ಮೂವರು ಹೆಂಡತಿಯರ ಕೈಗೆ ತಗಲಾಕೊಂಡ ಪತಿರಾಯ
ಝಾನ್ಸಿ (ಉತ್ತರ ಪ್ರದೇಶ): ಸಿನಿಮಾ ಕಥೆಗಳಲ್ಲೂ ಕಾಣದಂತಹ ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಆರು ವರ್ಷಗಳಲ್ಲಿ ಮೂರು ಮದುವೆಯಾಗಿ, ಪ್ರತಿ ಬಾರಿಯೂ ವರದಕ್ಷಿಣೆಗಾಗಿ ಪೀಡಿಸಿ ಪತ್ನಿಯರನ್ನು ಮನೆಯಿಂದ ಹೊರಹಾಕುತಿದ್ದ ಕಿಲಾಡಿ ಗಂಡ (Khiladi Husband), ನಾಲ್ಕನೇ ಮದುವೆಗೆ ಸಜ್ಜಾಗಿದ್ದ ಸಮಯದಲ್ಲಿ ಮೂವರು ಪತ್ನಿಯರ ಕೈಗೆ ಲಾಕ್ ಆಗಿದ್ದಾನೆ.
ಯಾರೂ ಈ 'ವರದಕ್ಷಿಣೆ ವೀರ'?
ಈ ವರದಕ್ಷಿಣೆ ವೀರನ ಹೆಸರು ಸುನಿಲ್ ಕುಮಾರ್, ಈತ ಲಲಿತಪುರದ ನಿವಾಸಿಯಾಗಿದ್ದು ಈತನ ತಂದೆ ರೈಲ್ವೆಯಲ್ಲಿ ಗ್ಯಾಂಗ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುನಿಲ್ ಮಾತ್ರ ಸರಿಯಾದ ಕೆಲಸವಿಲ್ಲದೆ ಅಲೆದಾಡುತ್ತಿದ್ದರೂ, ಮದುವೆ ಮಾರುಕಟ್ಟೆಯಲ್ಲಿ ಮಾತ್ರ ಈತನಿಗೆ ಭರ್ಜರಿ ಬೇಡಿಕೆ! ಪ್ರತಿ ಮದುವೆಯಲ್ಲೂ ಈತ ತನ್ನ ಹಳೆಯ ವಿವಾಹಗಳ ಬಗ್ಗೆ ಸುಳ್ಳು ಹೇಳಿ, ಲಕ್ಷಾಂತರ ರೂಪಾಯಿ ವರದಕ್ಷಿಣೆ ದೋಚುತ್ತಿದ್ದ ಎನ್ನುವುದು ಈಗ ಬೆಳಕಿಗೆ ಬಂದಿದೆ.
2019 ರಿಂದ 2023: ಇದು ಮದುವೆಯಲ್ಲ, ವಸೂಲಿ ದಂಧೆ!
ಈತನ ವಂಚನೆಯ ಜಾಲ ಎಷ್ಟು ವ್ಯವಸ್ಥಿತವಾಗಿತ್ತು ಎಂದರೆ, ಮೂವರು ಪತ್ನಿಯರಿಗೂ ವರ್ಷಗಳ ಕಾಲ ಒಬ್ಬರ ಅಸ್ತಿತ್ವದ ಬಗ್ಗೆ ಇನ್ನೊಬ್ಬರಿಗೆ ತಿಳಿದಿರಲೇ ಇಲ್ಲ.
ಮೊದಲ ಪತ್ನಿ (2019)
ಹಿಂದೂ ಸಂಪ್ರದಾಯದಂತೆ ಮೊದಲ ಮದುವೆಯಾದಾಗ ಪತ್ನಿಯ ಮನೆಯವರು ಸುಮಾರು 8 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸುನಿಲ್ ಮತ್ತು ಆತನ ಕುಟುಂಬದವರು ಹೆಚ್ಚಿನ ಹಣಕ್ಕಾಗಿ ಪೀಡಿಸಿ ಆಕೆಯನ್ನು ಮನೆಯಿಂದ ಹೊರಹಾಕಿದ್ದರು.
ಎರಡನೇ ಪತ್ನಿ (2021)
ಮೊದಲ ಪತ್ನಿ ದೂರವಾದ ಮೇಲೆ ಸುನಿಲ್ ಮತ್ತೊಂದು ಹಳ್ಳಿಯಲ್ಲಿ ರಹಸ್ಯವಾಗಿ ಎರಡನೇ ಮದುವೆಯಾದ. ಇಲ್ಲೂ 8 ಲಕ್ಷ ರೂ. ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಪೀಕಿದ್ದ. ಬುಲೆಟ್ ಬೈಕ್ ಮತ್ತು ಚಿನ್ನದ ಸರಕ್ಕಾಗಿ ಬೇಡಿಕೆ ಇಟ್ಟು, ಅದು ಸಿಗದಿದ್ದಾಗ ಎರಡನೇ ಪತ್ನಿಗೂ ಹಲ್ಲೆ ನಡೆಸಿ ಹೊರಹಾಕಿದ್ದ.
ಮೂರನೇ ಪತ್ನಿ (2023)
ಇಲ್ಲಿ ಸುನಿಲ್ ವಕ್ರಬುದ್ಧಿ ಮಿತಿಮೀರಿತ್ತು. ಮೂರನೇ ಪತ್ನಿ ಗರ್ಭಿಣಿಯಾದಾಗ ಆಕೆಗೆ ದೈಹಿಕ ಹಿಂಸೆ ನೀಡಿ ತವರು ಮನೆಗೆ ಕಳುಹಿಸಿದ್ದ. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಸುನಿಲ್‌ನ ಅಸಲಿ ಮುಖವಾಡ ಬಯಲಾಯಿತು.
ಮೂವರು ಪತ್ನಿಯರು ಒಂದಾದಾಗ
ತಾನು ಮೋಸ ಹೋಗಿರುವುದು ತಿಳಿದ ಮೇಲೆ ಮೂರನೇ ಪತ್ನಿ ಸುಮ್ಮನೆ ಕೂರಲಿಲ್ಲ. ಆಕೆ ಹಠ ಹಿಡಿದು ಸುನಿಲ್‌ನ ಹಳೆಯ ಸಂಸಾರಗಳ ಜಾಲವನ್ನು ಜಾಲಾಡಿದಾಗ ಇತರ ಇಬ್ಬರು ಮಹಿಳೆಯರು ಪತ್ತೆಯಾದರು. ಆಶ್ಚರ್ಯವೆಂದರೆ, ಸುನಿಲ್ ಈಗ ನಾಲ್ಕನೇ ಮದುವೆಗೆ ತಯಾರಿ ನಡೆಸುತ್ತಿದ್ದಾನೆಂಬ ಸುದ್ದಿ ಈ ಮೂವರಿಗೂ ಸಿಕ್ಕಿತ್ತು. ತಡ ಮಾಡದ ಮೂವರು ಪತ್ನಿಯರು ಗುರುವಾರ (ಫೆ.5) ಝಾನ್ಸಿಯ ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಒಟ್ಟಾಗಿ ಬಂದು ತಮ್ಮ ಗಂಡನ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸರು ಹೇಳಿದ್ದೇನು?
ಮೂವರು ಮಹಿಳೆಯರು ಜಂಟಿಯಾಗಿ ದೂರು ನೀಡಿದ್ದಾರೆ. ವಂಚನೆ, ವರದಕ್ಷಿಣೆ ಕಿರುಕುಳ ಮತ್ತು ದ್ವಿಪತ್ನಿತ್ವದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸುನಿಲ್ ಕುಮಾರ್‌ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು, ಎಂದು ಬಬಿನಾ ಪೊಲೀಸ್ ಠಾಣೆಯ ಉಸ್ತುವಾರಿ ಜೆಪಿ ಪಾಲ್ ತಿಳಿಸಿದ್ದಾರೆ,(ಏಜನ್ಸೀಸ್).