Exit Polls | ಎಕ್ಸಿಟ್ ಪೋಲ್ ಕುರಿತು ನಾಯಕರ ವಾಕ್ಸಮರ!
Exit Polls: ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಸಮೀಕ್ಷೆಗಳ ಕುರಿತು ವಿವಿಧ ಪಕ್ಷಗಳ ನಾಯಕರು ಪ್ರತಿಕ್ರಿಯಿಸಿದ್ದು, ಬಿಜೆಪಿಗರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಇವು ವಾಸ್ತವಕ್ಕೆ ದೂರವಾದ ಅಂಕಿಅಂಶಗಳೆಂದು ತಳ್ಳಿಹಾಕಿವೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಗೆ
ಬಿಜೆಪಿ ಪಾಲಿಗೆ ಪಶ್ಚಿಮ ಬಂಗಾಳ ಇಲ್ಲಿಯವರೆಗೂ ಹುಳಿ ದ್ರಾಕ್ಷಿಯಾಗಿತ್ತು. ಇಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂದು ಸುಮಾರು ಏಳೆಂಟು ವರ್ಷಗಳಿಂದ ಹವಣಿಸುತ್ತಿರುವ ಕೇಸರಿ ಪಾಳಯದಲ್ಲಿ ಈ ಬಾರಿ ಗೆಲುವಿನ ಆತ್ಮವಿಶ್ವಾಸವಿದೆ. ಈ ಕುರಿತಾಗಿ ಮಾತನಾಡಿರುವ ಬಿಜೆಪಿ ನಾಯಕ ಮನೋಜ್ ತಿವಾರಿ, ಸಮೀಕ್ಷೆಗಳು ನೀಡಿದ ಸಂಖ್ಯೆಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದಿದ್ದಾರೆ.
ಮೊದಲ ಹಂತದ ಮತದಾನದ ನಂತರವೇ ಬಿಜೆಪಿಯ ಗೆಲುವು ಖಚಿತವಾಗಿತ್ತು ಮತ್ತು ಎರಡನೇ ಹಂತದಲ್ಲಿ ಶೇ. 90ಕ್ಕೂ ಹೆಚ್ಚು ಮತದಾನವಾಗಿರುವುದು ಬಿಜೆಪಿ ಅಧಿಕಾರಕ್ಕೆ ಬರುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ತಿವಾರಿ ವಿಶ್ಲೇಷಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಶ್ರಮ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರ ನಿರ್ವಹಣೆ ಪಕ್ಷಕ್ಕೆ 180ಕ್ಕೂ ಹೆಚ್ಚು ಸ್ಥಾನಗಳನ್ನು ತಂದುಕೊಡಲಿದೆ ಎಂದರು.
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ತೃಣಮೂಲ ಕಾಂಗ್ರೆಸ್‌ನ ‘ಖೇಲಾ ಹೋಬೆ’ ಘೋಷಣೆಯನ್ನೇ ಬಳಸಿ ವ್ಯಂಗ್ಯವಾಡಿದ್ದು, ಆಟ ಈಗ ಮುಗಿದಿದೆ (ಖೇಲ್ ಖತಮ್), ಈ ಚುನಾವಣೆ ಜನರ ಮತ್ತು ಮಮತಾ ಬ್ಯಾನರ್ಜಿ ನಡುವಿನ ಹೋರಾಟವಾಗಿತ್ತು. ಮಮತಾಗೆ ಈ ಬಾರಿ ಮತಗಳಿಲ್ಲ ಎಂದು ಅವರು ಕುಟುಕಿದ್ದಾರೆ. ನಂದಿಗ್ರಾಮ್ ಮತ್ತು ಭವಾನಿಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕೂಡ ಹಿಂದೂ ಮತದಾರರ ಮುಕ್ತ ಬೆಂಬಲದಿಂದ ಬಿಜೆಪಿ 180ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಆಧಾರರಹಿತ ಎಂದ ಟಿಎಂಸಿ
ಬಿಜೆಪಿ ನಾಯಕರ ಈ ಹೇಳಿಕೆಗಳನ್ನು ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಸಂಪೂರ್ಣವಾಗಿ ನಿರಾಕರಿಸಿದ್ದು, ಎಕ್ಸಿಟ್ ಪೋಲ್ ಆಧಾರರಹಿತವಾಗಿವೆ, ವಾಸ್ತವಕ್ಕೂ ಇವುಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ನಾವು ಮಾ, ಮತಿ ಮತ್ತು ಮನುಷ್ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಟಿಎಂಸಿ 235ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದ್ದು, ಬಿಜೆಪಿ 50 ಸ್ಥಾನಗಳ ಗಡಿ ದಾಟುವುದು ಕಷ್ಟ ಎಂದು ತಿರುಗೇಟು ನೀಡಿದ್ದಾರೆ.
ತಮಿಳುನಾಡಿನ ನಾಯಕರುಗಳು ಹೇಳುವುದೇನು..?
ತಮಿಳುನಾಡಿನ ಫಲಿತಾಂಶದ ಬಗ್ಗೆಯೂ ಬಿಜೆಪಿ ಆಶಾವಾದಿಯಾಗಿದ್ದು, ಚೆನ್ನೈನಲ್ಲಿ ಮಾತನಾಡಿದ ಬಿಜೆಪಿ ನಾಯಕ ವಿನೋಜ್ ಪಿ ಸೆಲ್ವಂ, ಈ ಬಾರಿ ತಮಿಳುನಾಡಿನಲ್ಲಿ ವಿಭಿನ್ನ ಮತದಾನದ ಮಾದರಿ ಕಂಡುಬಂದಿದೆ ಎಂದಿದ್ದಾರೆ. ಸಾಮಾನ್ಯವಾಗಿ ಸಂಜೆ ವೇಳೆ ಮತದಾನ ಹೆಚ್ಚಿರುತ್ತಿತ್ತು, ಆದರೆ ಈ ಬಾರಿ ಸುಡುವ ಬಿಸಿಲಿನಲ್ಲೂ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 82ರಷ್ಟು ಮತದಾನವಾಗಿರುವುದು ಗಮನಾರ್ಹ. ಇದು ಜನರ ಸ್ಪಷ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.
ಮೇ 4ರ ಫಲಿತಾಂಶದ ಬಳಿಕ ಇಪಿಎಸ್ (ಎಡಪ್ಪಾಡಿ ಕೆ. ಪಳನಿಸ್ವಾಮಿ) ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮತ್ತೆ ಹಳಿಗೆ ಮರಳಲಿದೆ ಎಂದು ವಿನೋಜ್ ಪಿ ಸೆಲ್ವಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾರನ್ನೋ ಮೆಚ್ಚಿಸಲು ಈ ಎಕ್ಸಿಟ್ ಪೋಲ್ ಎಂದ ಕಾಂಗ್ರೆಸ್
ಕಾಂಗ್ರೆಸ್ ನಾಯಕರು ಈ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದು, ಸಂಸದ ರಾಜೇಶ್ ಠಾಕೂರ್ ಮಾತನಾಡಿ, ಎಕ್ಸಿಟ್ ಪೋಲ್‌ಗಳು ಯಾರನ್ನೋ ಮೆಚ್ಚಿಸಲು ನೀಡುವ ಅಂಕಿಅಂಶಗಳಾಗಿವೆ. ಇವು ಚುನಾವಣಾ ಆಯೋಗ ಮತ್ತು ಇವಿಎಂಗಳ ಮೇಲಿನ ಅನುಮಾನವನ್ನು ಹೆಚ್ಚಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಕೈ ನಾಯಕ ತಾರಿಕ್ ಅನ್ವರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಎಂದಿಗೂ ಇಂತಹ ಸಮೀಕ್ಷೆಗಳನ್ನು ನಂಬಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಸ್ಸಾಂನಲ್ಲಿ ತೀವ್ರ ಪೈಪೋಟಿ ಇದ್ದರೆ, ಕೇರಳದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವಿದೆ. ಬಂಗಾಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಯಾವ ಕಾರಣಗಳೂ ನಮಗೆ ಕಾಣಿಸುತ್ತಿಲ್ಲ. ಸರ್ಕಾರಿ ಯಂತ್ರೋಪಕರಣಗಳು ಮತ್ತು ಕೇಂದ್ರ ಪಡೆಗಳ ಅತಿಯಾದ ಬಳಕೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ತಾರಿಕ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷಗಳು ತಮ್ಮ ಗೆಲುವಿನ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದರೆ, ವಿರೋಧ ಪಕ್ಷಗಳು ಈ ಸಮೀಕ್ಷೆಗಳನ್ನು ಆಧಾರರಹಿತವೆಂದು ತಳ್ಳಿಹಾಕಿವೆ. ಅಂತಿಮವಾಗಿ ಜನರ ತೀರ್ಪು ಯಾರ ಪರವಾಗಿದೆ ಎಂಬುದು ಮೇ 4ರ ಫಲಿತಾಂಶದಂದು ಸ್ಪಷ್ಟವಾಗಲಿದೆ(ಏಜೆನ್ಸೀಸ್).