Nepal Floods | ಪ್ರಧಾನಿ ಮೋದಿ, ಗೃಹ ಸಚಿವ ಷಾಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ 
ದೇಶ

ನೇಪಾಳದ ಭೀಕರ ಪ್ರವಾಹದಲ್ಲಿ 320 ಭಾರತೀಯರು ನಾಪತ್ತೆ!...ಪ್ರಧಾನಿ ಮೋದಿ, ಗೃಹ ಸಚಿವ ಷಾಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ | Nepal Floods

Nepal Floods

ನೆರೆ ಪೀಡಿತ ನೇಪಾಳದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಮತ್ತು ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಆಗ್ರಹಿಸಿದ್ದಾರೆ. ಜೊತೆಗೆ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರಿಗೆ ಬರೆದಿರುವ ಪ್ರತ್ಯೇಕ ಪತ್ರಗಳಲ್ಲಿ, 600ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಹಾಗೂ 1,924 ಜನರು ನಾಪತ್ತೆಯಾಗಲು ಕಾರಣವಾದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ, ನೇಪಾಳ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ತಕ್ಷಣದ ಮಾನವೀಯ ನೆರವು ನೀಡುವಂತೆ ಖರ್ಗೆ ಮನವಿ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮನವಿ ಹೀಗಿದೆ!...

ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಖರ್ಗೆ ಅವರು ನೇಪಾಳದ ರಸುವಾ ಜಿಲ್ಲೆ ಹಾಗೂ ಭೋಟೇಕೋಶಿ ನದಿ ಪಾತ್ರದಲ್ಲಿ ಆಗಸ್ಟ್ 26ರಂದು ಉಂಟಾದ ಪ್ರವಾಹದಿಂದ ಸಂಭವಿಸಿದ ಜೀವಹಾನಿ ಮತ್ತು ವ್ಯಾಪಕ ವಿನಾಶದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಕೋಪದ ಪ್ರಮಾಣವನ್ನು ಪ್ರಸ್ತಾಪಿಸಿದ ಅವರು, ಸಾವಿರಾರು ಜನರಿಗೆ ಆಹಾರ, ಔಷಧಗಳು, ಆಶ್ರಯ ಮತ್ತು ಇತರ ಅತ್ಯಗತ್ಯ ನೆರವಿನ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ. ಸಂಕಷ್ಟದಲ್ಲಿರುವ ನೇಪಾಳದ ಜನರಿಗೆ ನೇಪಾಳ ಸರ್ಕಾರದ ಸಹಯೋಗದೊಂದಿಗೆ ಸೂಕ್ತ ಮಾನವೀಯ ಮತ್ತು ಪರಿಹಾರ ನೆರವು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಖರ್ಗೆ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ನೇಪಾಳದ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳ ರಕ್ಷಣೆ ಹಾಗೂ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಅವರನ್ನು ಶೀಘ್ರ ಹಾಗೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಸುಮಾರು 320 ಭಾರತೀಯ ಪ್ರಜೆಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇತ್ತೀಚಿನ ಮಾಹಿತಿಯನ್ನು ಅವರು ನಿರ್ದಿಷ್ಟವಾಗಿ ಪ್ರಸ್ತಾಪಿಸಿದ್ದು, ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲಾ ನೆರವು ನೀಡಲು ಭಾರತ ಸರ್ಕಾರ ತಕ್ಷಣದ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಭರವಸೆ ತಮಗಿದೆ ಖರ್ಗೆ ಅವರು ಹೇಳಿದ್ದಾರೆ.
ಇದುವರೆಗೆ 84 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. ರಕ್ಷಿಸಲ್ಪಟ್ಟವರಲ್ಲಿ ಶುಕ್ರವಾರ ಭಾರತಕ್ಕೆ ಮರಳಿದ ತಮಿಳುನಾಡಿನ 21 ನಿವಾಸಿಗಳು ಮತ್ತು ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ 63 ಕಾರ್ಮಿಕರು ಸೇರಿದ್ದಾರೆ.

ಅಮಿತ್​ ಷಾ ಅವರಿಗೆ ಬರೆದ ಪತ್ರದ ಸಾರಾಂಶ ಹೀಗಿದೆ!...

ಗೃಹ ಸಚಿವ ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ಅವರು, ನೇಪಾಳ ಸರ್ಕಾರದ ಸಹಯೋಗದೊಂದಿಗೆ ಅಗತ್ಯವಿರುವ ಕಡೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನೈಸರ್ಗಿಕ ವಿಕೋಪಗಳಿಗೆ ಸ್ಪಂದಿಸುವಲ್ಲಿ ಎನ್‌ಡಿಆರ್‌ಎಫ್ ಹೊಂದಿರುವ ಪರಿಣತಿಯು ರಕ್ಷಣೆ, ತೆರವು ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಮೌಲ್ಯಯುತ ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತ ಪ್ರದೇಶಗಳಲ್ಲಿ ರಕ್ಷಣೆ, ತೆರವು ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ನೆರವಾಗಲು ನೇಪಾಳ ಸರ್ಕಾರದ ಸಹಯೋಗದೊಂದಿಗೆ ಅಗತ್ಯವಿರುವ ಕಡೆಗಳಲ್ಲಿ ಎನ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಬಹುದು ಎಂದು ಖರ್ಗೆ ಸಲಹೆ ನೀಡಿದ್ದಾರೆ.

ನೇಪಾಳ ತಲುಪಿದ ಟೀಮ್ ಇಂಡಿಯಾ!

ಸ್ಥಳೀಯ ಅಧಿಕಾರಿಗಳಿಗೆ ನೆರವಾಗಲು ನೇಪಾಳ ಸರ್ಕಾರದ ಕೋರಿಕೆಯ ಮೇರೆಗೆ 11 ಸದಸ್ಯರ ಭಾರತೀಯ ತಂಡವು ಶನಿವಾರ ನೇಪಾಳ ತಲುಪಿದ್ದು, ಈ ತಂಡದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ತಜ್ಞರು ಸೇರಿದ್ದು, ರಭಸದ ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ಅವರನ್ನು ಕಳುಹಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿದಂತೆ ಭಾರತವು ನೇಪಾಳಕ್ಕೆ ಪರಿಹಾರ ಮತ್ತು ರಕ್ಷಣಾ ಬೆಂಬಲವನ್ನು ನೀಡುತ್ತಾ ಬಂದಿದೆ. ಮಾನವೀಯ ನೆರವು ಹೊತ್ತ ಭಾರತದ ಮೂರನೇ ವಿಮಾನ ಶುಕ್ರವಾರ ಕಠ್ಮಂಡು ತಲುಪಿದ್ದು, ಪರಿಹಾರ ಸಾಮಗ್ರಿಗಳನ್ನು ನೇಪಾಳದ ಸಚಿವ ಮಹಾವೀರ ಪುನ್ ಅವರಿಗೆ ಹಸ್ತಾಂತರಿಸಲಾಗಿದೆ. ಆಗಸ್ಟ್ 26 ರಂದು ರಸುವಾ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ನುಗ್ಗಿದ ರಭಸದ ಪ್ರವಾಹವು ವಸತಿ ಪ್ರದೇಶಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಮೂಲಸೌಕರ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಿದೆ(ಏಜೆನ್ಸೀಸ್​).