ದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಪರಿಹರಿಸಲು ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ಮೌನ ಕಾಯ್ದುಕೊಂಡಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಲಾಪದ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ, ಟ್ರಂಪ್ರ ಈ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುತ್ತವೆ ಮತ್ತು ಅವುಗಳನ್ನು ನಿರ್ಲಕ್ಷಿಸಬಾರದು, ಈ ವಿಷಯದ ಕುರಿತಾಗಿ ಸರ್ಕಾರ ಸಂಸತ್ತಿಗೆ ಮತ್ತು ರಾಷ್ಟ್ರಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದರು.
ಭಾರತೀಯ ಪ್ರಜೆಯ ಬಂಧನದ ಬಗ್ಗೆಯೂ ಪ್ರಸ್ತಾಪ.
ಚೀನಾ, ಅರುಣಾಚಲ ಪ್ರದೇಶ ಮೂಲದ ಭಾರತೀಯ ಪ್ರಜೆಯನ್ನು ಬಂಧಿಸಿದ್ದು, ಆ ವ್ಯಕ್ತಿಗೆ ಚೀನಾದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಈ ಘಟನೆಯು ಚೀನಾದ ಆಕ್ರಮಣಶೀಲತೆಯನ್ನು ಪ್ರತಿಬಿಂಬಿಸುತ್ತದೆ, ಹೀಗಿದ್ದಾಗಲೂ ಕೇಂದ್ರ ಸರ್ಕಾರ ಏಕೆ ಇದರ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಜೆಯ ಮೇಲೆ ನಡೆದ ದೌರ್ಜನ್ಯದ ಬಗ್ಗೆಯೂ ಖರ್ಗೆ ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಷಾಗೆ ತಿರುಗೇಟು...
ವಂದೇ ಮಾತರಂ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಖರ್ಗೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಅನ್ನು ಘೋಷಣೆಯನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಅಲ್ಲದೆ, ನಿಮ್ಮ ಇತಿಹಾಸವೆಂದರೆ ನೀವು ಯಾವಾಗಲೂ ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿ ಗೀತೆಗಳನ್ನು ವಿರೋಧಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. 1921 ರಲ್ಲಿ ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದಾಗ, ಕಾಂಗ್ರೆಸ್‌ನ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ವಂದೇ ಮಾತರಂ ಎಂದು ಜಪಿಸುತ್ತಾ ಜೈಲಿಗೆ ಹೋದರು. ನೀವು ಏನು ಮಾಡುತ್ತಿದ್ದಿರಿ? ನೀವು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದೀರಿ ಗೃಹ ಸಚಿವ ಅಮಿತ್ ಷಾಗೆ ಖರ್ಗೆ ತಿರುಗೇಟು ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾಜಿ ಪ್ರಧಾನಿ ನೆಹರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಲದೆ, ಮೋದಿ ಜವಾಹರಲಾಲ್ ನೆಹರು ಅವರನ್ನು ಅವಮಾನಿಸಲು ಸಿಕ್ಕ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ದೇಶದ ಗೃಹ ಸಚಿವರು ಕೂಡ ಅದನ್ನೇ ಅನುಸರಿಸುತ್ತಾರೆ ಎಂದು ಕಿಡಿಕಾರಿದ್ದಾರೆ(ಏಜೆನ್ಸೀಸ್).