ಚಿತ್ರ ೦೪ ಕೆ.ಎಲ್.ಆರ್. ೦೫ : ರೌಡಿ ಪೇರೆಡ್‌ನಲ್ಲಿ ಅಸಾಮಿಗಳಿಗೆ ಎಸ್ಪಿ ಶಿವಾಂಶು ರಜಪೂತ್ ಅವರು ತರಾಟೆಗೆ ತೆಗೆದುಕೊಂಡರು. ಡಿ.ವೈ.ಎಸ್.ಪಿವಿ.ಲಕ್ಷ್ಮಯ್ಯ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಕೋಲಾರ/ಕೆಜಿಎಫ್
ರೌಡಿ ಅಸಾಮಿಗಳು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾದರೆ ನಿಮ್ಮ ವಿರುದ್ಧ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಸಾರ್ವಜನಿಕರ ನೆಮ್ಮದಿಗೆ ತೊಂದರೆ ನೀಡದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ನಡೆಸಿ ಎಂದು ಕೆ.ಜಿ.ಎಫ್. ಪೋಲಿಸ್ ಘಟಕದ ಎಸ್.ಪಿ ಶಿವಾಂಶು ರಜಪೂತ್ ತಿಳಿಸಿದರು.
ಭಾನುವಾರ ಬೆಳ್ಳಿಗ್ಗೆ ಡಿಎಆರ್ ಕವಾಯತು ಮೈದನದಲ್ಲಿ ಮುಂಜಾಗೃತ ಕ್ರಮವಾಗಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ರೌಡಿ ಆಸಾಮಿಗಳ ರೌಡಿ ಚಟುವಟಿಕೆಗಳನ್ನು ನಿಯಂತ್ರಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ರೌಡಿ ಪೇರೆಡ್‌ನಲ್ಲಿ ರೌಡಿ ಅಸಾಮಿಗಳಿಗೆ ಎಚ್ಚರಿಕೆ ಮತ್ತು ಸನ್ನಡತೆಯಿಂದ ನಡೆದುಕೊಳ್ಳಲು ಸೂಚಿಸಿದರು.
ಕೆ.ಜಿ.ಎಫ್. ಪೋಲಿಸ್ ಘಟಕದ ಜಿಲ್ಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೬೬೪ ರೌಡಿ ಶೀಟರ್‌ಗಳಿದ್ದು, ಪೆರೇಡ್‌ಗೆ ೨೮೦ ಜನ ಹಾಜರಾಗಿದ್ದರು. ಇದರಲ್ಲಿ ೧೮೭ ರೌಡಿಶೀಟರ್‌ಗಳನ್ನು ಪಟ್ಟಿಮಾಡಿ ಕಳೆದ ೧೦ ವರ್ಷಗಳಿಂದ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಮತ್ತು ಕೃತ್ಯಗಳಲ್ಲಿ ಭಾಗಿಯಾಗದೆ ಒಳ್ಳೆಯ ಗುಣ ನಡೆತೆಯಿಂದ ಇರುವುದರಿಂದ ಇವರ ಬಳಿ ಮುಚ್ಚಳಿಕೆಯನ್ನು ಬರೆಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಇರುವಂತೆ ಎಚ್ಚೆರಿಕೆ ನೀಡಿ ಮುಕ್ತಾಯ ಮಾಡಲು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಮುಕ್ತಾಯದ ನಂತರ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಇರುವಂತೆ ಎಚ್ಚರಿಕೆ ನೀಡಿದರು. ಮತ್ತೆ ಏನಾದರೂ ಭಾಗವಹಿಸಿದರೆ ರೌಡಿ ಶೀಟರ್‌ನ್ನು ಪುನಃ ತೆರೆದು ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೌಡಿ ಪೇರೆಡ್‌ನಲ್ಲಿ ಗೈರು ಹಾಜರಾಗಿರುವ ರೌಡಿ ಆಸಾಮಿಗಳಿಗೆ ಮುಂದಿನ ದಿನಗಳಲ್ಲಿ ವೃತ್ತ ಕಛೇರಿಗಳಲ್ಲಿ ರೌಡಿ ಪೇರೆಡ್ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತ್ತೆ ರೌಡಿ ಪೇರೆಡ್ ಗೆ ಗೈರುಹಾಜರಾದಲ್ಲಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ರೌಡಿ ವರ್ತನೆಗಳನ್ನು ತೋರಿಸುವ ರೀತಿಯಲ್ಲಿ ಪೋಸ್ಟ್ ಮತ್ತು ರೀಲ್ಸ್ ಮಾಡುವವರ ವಿರುದ್ಧ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಡಿವೈಎಸ್‌ಪಿ ವಿ.ಲಕ್ಷ್ಮಯ್ಯ, ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಎಸ್.ಟಿ.ಮಾರ್ಕೊಂಡಯ್ಯ, ಪಿ.ಎಂ.ನವೀನ್, ದಯಾನಂದ್, ರಂಗಶಾಮಯ್ಯ, ಆರ್.ಪಿ.ಐ ಸೋಮಶೇಖರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳಾದ ಬಿ.ಮಂಜುನಾಥ, ಚಂದ್ರಶೇಖರ್, ಗುರುರಾಜ ಚಿಂತಕಲ್, ಸಂಗಮೇಶ್ ಕೋಲ್ದಾರ್, ಕೃಷ್ಣಮೂರ್ತಿ, ಎಸ್.ವಿ.ರಾಜಣ್ಣ, ಎನ್.ಪಿ.ಸಿಂಗ್, ಲಕ್ಷ್ಮಿನಾರಾಯಣ, ಜಿ.ಮಾಲಾ ಹಾಜರಿದ್ದರು.