ಉತ್ತರ ಪ್ರದೇಶದಲ್ಲಿ ವಿಷಕಾರಿ ಟೊಮಾಟೊ ಸಾಸ್ ತಯಾರಿಕಾ ಘಟಕ ಪತ್ತೆ
- ಉತ್ತರ ಪ್ರದೇಶದಲ್ಲಿ ವಿಷಕಾರಿ ಟೊಮಾಟೊ ಸಾಸ್ ತಯಾರಿಕಾ ಘಟಕ ಪತ್ತೆ
- ಸುಮಾರು 200 ಕಿ.ಲೋ ನಕಲಿ ಸಾಸ್ ಜಪ್ತಿ
- ಇದನ್ನು ಸೇವಿಸಿದರೆ ಕಿಡ್ನಿ, ಲಿವರ್ ಮತ್ತು ಕರಳಿನ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದ ಅಧಿಕಾರಿಗಳು
ಉತ್ತರ ಪ್ರದೇಶ: ಭಾರತದಲ್ಲಿ ಆಹಾರ ಕಲಬೆರಿಕೆ ಪ್ರಕರಣಗಳು ದಿನ ಬೆಳಗಾದರೆ ಒಂದರಂತೆ ಬೆಳಕಿಗೆ ಬರುತ್ತಿದ್ದು, ನಾವು ಸೇವಿಸುತ್ತಿರುವ ಯಾವ ಪದಾರ್ಥ ಅಸಲಿ? ಯಾವುದು ನಕಲಿ? ಎಂದು ತಿಳಿಯುವುದೇ ಒಂದು ಸಾಹಸವಾಗಿ ಮಾರ್ಪಟ್ಟಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಹಾಪೂರ್ನಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಿಕೊಂಡು ಟೊಮಾಟೊ ಸಾಸ್(Tomato Sauce)ನ್ನು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆದ ಕುರಿತು ವರದಿಯಾಗಿದೆ. ದಾಳಿ ನಡೆದ ಘಟಕದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂದು ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನಲೆಯಲ್ಲಿ ಆರೋಗ್ಯ ಸುರಕ್ಷಣಾ ಅಧಿಕಾರಿಗಳು ದಾಳಿ ನಡೆಸಿದಾಗ ಈ ಜಾಲ ಪತ್ತೆಯಾಗಿದೆ.
ಕೊಳೆತ ಟೊಮಾಟೊ, ರಾಸಾಯನಿಕ ಬಳಕೆ!
ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ, ಸಾಸ್ನ್ನು ತಯಾರಿಸಲು, ಕೊಳೆತ ಟೊಮಾಟೊ, ಕೃತಕ ಬಣ್ಣಗಳು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಈ ದಾಳಿಯಲ್ಲಿ ಸುಮಾರು 200 ಕಿ.ಲೋ ವಿಷಕಾರಿ ಸಾಸ್ನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಈ ಸಾಸ್ ಒಂದರ್ಥದಲ್ಲಿ ನಕಲಿಯೇ ಆಗಿದ್ದು ಇದರ ಸೇವನೆ ಸಾವಿಗೆ ಆಹ್ವಾನವಾಗಿದೆ ಎನ್ನುವುದು ಆರೋಗ್ಯ ಸುರಕ್ಷಾ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಸಾನ್ ತಿನ್ನಲು ಯೋಗ್ಯವಲ್ಲ
ಈ ಘಟಕದಲ್ಲಿ ತಯಾರಾದ ಸಾಸ್ನ್ನು ಹತ್ತಿರದ ಸಣ್ಣ-ಪುಟ್ಟ ಅಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ಸಹ ಮಾಹಿತಿ ಲಭ್ಯವಾಗಿದೆ. ಇಲ್ಲಿ ನಿರ್ಮಿಸಲಾದ ಸಾಸ್ನಲ್ಲಿ ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ರಾಸಾಯನಿಕಗಳು ಕಂಡುಬಂದಿದ್ದು, ಇದರ ಸೇವನೆ ಹೊಟ್ಟೆ, ಕರಳು ಮತ್ತು ಲಿವರ್ ಗೆ ಸಂಬಂಧಿಸಿದ ಕಾಯಿಲೆಗೆ ದಾರಿ ಮಾಡಿ ಕೊಡಲಿದೆ ಎನ್ನುವುದು ಅಧಿಕಾರಿಗಳ ಎಚ್ಚರಿಕೆಯಾಗಿದೆ.
ಸದ್ಯ ಈ ಘಟಕಕ್ಕೆ ಬೀಗ ಹಾಕಲಾಗಿದ್ದು, ಘಟಕದ ಮಾಲೀಕನ ಮೇಲೆ ದೂರನ್ನು ಸಹ ದಾಖಲಿಸಲಾಗಿದೆ. ಈ ಕುರಿತು ನ್ಯಾಯಬದ್ಧವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ, (ಏಜನ್ಸೀಸ್).