ಕೇತನ್​ ಕೊಲೆ ಪ್ರಕರಣ, ಆರೋಪಿ ಸಿಯಾ ಗೋಯೆಲ್​ 
ದೇಶ

ಮೊದಲು ದ್ರೋಹ ಬಗೆದ! ಈಗ ಕಾಲ್​... ಪಬ್​ನಲ್ಲಿ ಕೊಲೆ ಆರೋಪಿ ಸಿಯಾ ಮಾತಾಡಿದ್ದ ಹಳೆಯ ವಿಡಿಯೋ ವೈರಲ್​

ಪ್ರಮುಖ ಮುಖ್ಯಾಂಶಗಳು

  • ಕೇತನ್​ ಅಗರ್ವಾಲ್​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯೆಲ್​
  • ಸಿಯಾಳ ಹಳೆಯ ವಿಡಿಯೋ ಈಗ ವೈರಲ್​
  • ಪಬ್​ನಲ್ಲಿ ಬಿಯರ್​ ಕುಡಿಯುತ್ತಿದ್ದ ವೇಳೆ ಫೋನ್​ನಲ್ಲಿ ಯಾರಿಗೋ ಬೈಗುಳ
Ketan Murder Case: ಅದ್ಧೂರಿ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ವರನನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದಿರುವ ಯುವತಿಯ ಪಾಪದ ಕೃತ್ಯಕ್ಕೆ ಇಡೀ ದೇಶವೇ ಹಿಡಿಶಾಪ ಹಾಕುತ್ತಿದೆ. ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಿಯಾಳಿಗೆ ಸಂಬಂಧಿಸಿದ ಶಾಕಿಂಗ್ ವಿಡಿಯೋ ಫೋಟೋಜ್​ವೊಂದು​ ಇದೀಗ ಖಾಕಿ ಕಣ್ಣಿಗೆ ಬಿದ್ದಿದೆ.
ಕೇತನ್ ಅಗರ್ವಾಲ್ ಹತ್ಯೆ ಕೇಸ್​ನ ಪ್ರಮುಖ ಆರೋಪಿಯಾಗಿರುವ ಸಿಯಾ ಗೋಯಲ್​ನ ಹಳೆಯ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ದೃಶ್ಯ ಪೊಲೀಸರ ತನಿಖೆಗೆ ಮತ್ತೊಂದು ಹೊಸ ಟ್ವಿಸ್ಟ್​ ಕೊಟ್ಟಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ರೆಕಾರ್ಡ್ ಆಗಿದೆ ಎನ್ನಲಾದ ವಿಡಿಯೋದಲ್ಲಿ, ಸಿಯಾ ನೈಟ್‌ಕ್ಲಬ್‌ ಎಂಬ ಪಬ್​ನಲ್ಲಿ ಬಿಯರ್ ಬಾಟಲಿಯಂತೆ (ಅಸ್ಪಷ್ಟ) ಕಾಣುವ ವಸ್ತುವನ್ನು ಹಿಡಿದುಕೊಂಡು ಫೋನ್‌ನಲ್ಲಿ ಯಾರಿಗೋ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ದೃಶ್ಯ ಸೆರೆಯಾಗಿದೆ.
ಕೇವಲ 15 ಸೆಕೆಂಡ್​ಗಳ ವಿಡಿಯೋ ಕ್ಲಿಪ್‌ನಲ್ಲಿ ಸಿಯಾ, ತನಗೆ ಬಂದ ದೂರವಾಣಿ ಕರೆಗೆ "ಯಾರಿದು? ಎಂದು ಮಾತು ಆರಂಭಿಸಿ, ಜೋರು ಮ್ಯೂಸಿಕ್​ನ ನಡುವೆಯೂ ಸಂಭಾಷಣೆ ನಡೆಸಿದ್ದಾಳೆ. ಈ ವೇಳೆ, ಅಸಭ್ಯ ಪದಗಳಲ್ಲಿ ಬೈದು, ಮೊದಲು ನನಗೆ ದ್ರೋಹ ಬಗೆದು. ಈಗ ಕಾಲ್​ ಮಾಡುತ್ತಾನೆ ಎಂದು ಹೇಳಿರುವುದು ರೆಕಾರ್ಡ್​ ಆಗಿದೆ. ಪೊಲೀಸರಲ್ಲಿ ಈಗ ಅನುಮಾನ ಹೆಚ್ಚಾಗಿದ್ದು, ಮೋಸ ಮಾಡಿದ ಎನ್ನಲಾದ ವ್ಯಕ್ತಿ ಯಾರು? ಆತ ಈಕೆಯ ಬಾಯ್​ಫ್ರೆಂಡ್​ ಅಥವಾ ಮೃತ ಕೇತನ್​? ಇಲ್ಲ ಇನ್ಯಾರಾದರೂ ಆಗಿರಬಹುದಾ? ಎಂದು ಶಂಕಿಸಿದ್ದಾರೆ.

ಮಾಧ್ಯಮಗಳ ಮುಂದೆ ವಿಕೃತ ಸನ್ನೆ

ಇಂದು (ಜು.03) ಕೇತನ್​ ಅಗರ್ವಾಲ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸಲು ಪೊಲೀಸರು ಆರೋಪಿ ಸಿಯಾ ಗೋಯೆಲ್​ ಅವರನ್ನು ಅವರ ಮನೆಗೆ ಕರೆತಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಭದ್ರತೆಯೊಂದಿಗೆ ತನ್ನ ಮನೆಯಿಂದ ಹೊರಬರುತ್ತಿದ್ದಾಗ, ಸಿಯಾ ಹೊರಗೆ ನೆರೆದಿದ್ದ ಮಾಧ್ಯಮ ಸಿಬ್ಬಂದಿಯತ್ತ ತನ್ನ ಮಧ್ಯದ ಬೆರಳನ್ನು ತೋರಿಸಿ ವಿಕೃತ ಹಾಗೂ ಅಸಭ್ಯ ಸನ್ನೆಯನ್ನು ಮಾಡಿದ್ದಾಳೆ. ಒಂದು ಜೀವವನ್ನು ಬಲಿ ಪಡೆದಿದ್ದರೂ ಇಂತಹ ದರ್ಪ, ಸೊಕ್ಕಿಗೇನು ಕಡಿಮೆಯಿಲ್ಲ. ಇಂಥವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಏನಿದು ಪ್ರಕರಣ?

ಕುಟುಂಬಸ್ಥರು ಸಿಯಾ ಗೋಯೆಲ್​ ಮತ್ತು ಕೇತನ್ ಅಗರ್ವಾಲ್​ ಜೋಡಿಯ ಮದುವೆಯನ್ನು ಮುಂಬರುವ ನವೆಂಬರ್ ತಿಂಗಳಿನಲ್ಲಿ ನಿಶ್ಚಯಿಸಿದ್ದರು. ಆದರೆ, ಸಿಯಾ ಅದಾಗಲೇ ತನ್ನ ಬಾಯ್​ಫ್ರೆಂಡ್​ ಚೇತನ್‌ನನ್ನು ಪ್ರೀತಿಸುತ್ತಿದ್ದರಿಂದ, ತಮ್ಮ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂಬುದನ್ನು ಅರಿತ ಇವರಿಬ್ಬರು ಆತನನ್ನು ಕೊಲೆ ಮಾಡಲು ಕ್ರೂರ ಸಂಚು ರೂಪಿಸಿದರು.
ಜೂನ್ 14ರಂದು ಕೇತನ್‌ನನ್ನು ಕೊಲೆ ಮಾಡಲು ಮೊದಲ ಬಾರಿ ಸಿಯಾ ಪ್ರಯತ್ನಿಸಿದಳು. ಅಂದು ಆಕೆ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಕಂದಕದ ಅಂಚಿಗೆ ತಳ್ಳಿದ್ದಳು. ಆದರೆ, ಅದೃಷ್ಟವಶಾತ್ ಬೆಟ್ಟದ ಇಳಿಜಾರಿನಲ್ಲಿದ್ದ ದಟ್ಟ ಪೊದೆಯನ್ನು ಹಿಡಿದುಕೊಂಡು ಕೇತನ್ ಪ್ರಾಣಾಪಾಯದಿಂದ ಪಾರಾಗಿದ್ದನು. ಇದರಿಂದ ಗಾಬರಿಗೊಂಡ ಸಿಯಾ, ಅಲ್ಲಿ ಹಾವು ಇರುವುದನ್ನು ಕಂಡು ತಾನು ಕೂಗಾಡಿದ್ದಾಗಿ ಸುಳ್ಳು ಹೇಳಿ, ಕೇತನ್‌ನನ್ನು ಅಪ್ಪಿಕೊಂಡು ಆತನ ಗಮನ ಬೇರೆಡೆ ಸೆಳೆದು ತನ್ನ ಮೊದಲ ಕೊಲೆ ಯತ್ನವನ್ನು ಮುಚ್ಚಿಹಾಕಿದ್ದಳು.
ಮೊದಲ ಪ್ರಯತ್ನ ವಿಫಲವಾದ ನಂತರ, ಸಿಯಾ ಜೂನ್ 18ರಂದು ಕೇತನ್‌ನನ್ನು ಮತ್ತೊಮ್ಮೆ ಬಲವಂತವಾಗಿ ಕೋಟೆಗೆ ಕರೆತಂದಿದ್ದಳು. ಈ ಬಾರಿ ಆಕೆ ತನ್ನ ಪ್ರಿಯಕರ ಚೇತನ್‌ನನ್ನೂ ಜೊತೆಗೆ ಕರೆಸಿಕೊಂಡಿದ್ದಳು. ತದನಂತರ ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ತಳ್ಳಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳಾದ ಸಿಯಾ ಮತ್ತು ಚೇತನ್‌ನನ್ನು ಬಂಧಿಸಿರುವ ಪುಣೆ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).