- ಬೆಟ್ಟದ ತುದಿಯಿಂದ ಕೇತನ್ನನ್ನು ತಳ್ಳಿ ಹತ್ಯೆಗೈದ ಆರೋಪಿ ಸಿಯಾ
- ಸಿಯಾ ಗೋಯಲ್ ವಿದ್ಯಾರ್ಹತೆ ಬಗ್ಗೆ ಬಾಯ್ಬಿಟ್ಟ ತಾಯಿ ಪೂಜಾ
Ketan Murder Case: ಸಂಭ್ರಮ, ಸಡಗರದಿಂದ ನಡೆಯಬೇಕಿದ್ದ ಅದ್ಧೂರಿ ಮದುವೆಯು ಕೊಲೆ ಪ್ರಕರಣದಿಂದ ಮುರಿದು ಬಿದ್ದ ಘಟನೆ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನೂರಾರು ಆಸೆಗಳನ್ನು ಕಟ್ಟಿಕೊಂಡು, ಹೊಸ ಬಾಳಿನ ಹೊಸ್ತಿಲಲ್ಲಿದ್ದ ಕೇತನನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದ ಸಿಯಾ ಗೋಯಲ್ ಪಾಪದ ಕೃತ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಪ್ರಸ್ತುತ ತನಿಖೆಯಲ್ಲಿರುವ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯ ತಾಯಿ ಕೆಲವು ಸತ್ಯ ಸಂಗತಿಗಳನ್ನು ಈಗ ಬಿಚ್ಚಿಟ್ಟಿದ್ದಾರೆ.
ಪ್ರಸ್ತುತ ಕೇತನ್ ಕೊಲೆಗೈದ ಆರೋಪಿ ಸಿಯಾ ಗೋಯಲ್ ಬಂಧಿತಳಾಗಿದ್ದು, ಪೊಲೀಸರ ವಿಚಾರಣೆಯಲ್ಲಿ ಒಂದಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾಳೆ. ಇದರ ಸುತ್ತವೇ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದರೆ, ಅತ್ತ ಮಗನನ್ನು ಕಳೆದುಕೊಂಡ ತಾಯಿ ಮತ್ತು ಆರೋಪಿ ಪೋಷಕರ ನಡುವೆ ಆರೋಪ-ಪ್ರತ್ಯಾರೋಪಗಳ ವಾಕ್ಸಮರವೇ ನಡೆದಿವೆ. ಈ ಮಧ್ಯೆ, ಸಿಯಾ ತಾಯಿ ಪೂಜಾ ಗೋಯಲ್ ಮಾತನಾಡಿ, ಸಿಯಾಳ ವಿದ್ಯಾರ್ಹತೆ ಬಗ್ಗೆ ಕೇತನ್ ಕುಟುಂಬದಿಂದ ಮುಚ್ಚಿಟ್ಟ ವಿಷಯವನ್ನು ಹಂಚಿಕೊಂಡಿದ್ದಾರೆ.
ಮಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. 12ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ನಿಶ್ಚಿತಾರ್ಥ ಅಂತಿಮಗೊಳ್ಳುವ ಮುನ್ನ ಈ ವಿಷಯವನ್ನು ನಾನು ಕೇತನ್ ಅಗರ್ವಾಲ್ ಅವರ ಕುಟುಂಬಕ್ಕೆ ಬಹಿರಂಗಪಡಿಸಿದೆ. ಓದಿನಲ್ಲಿ ಮುಂದುವರಿಸಲು ಇಚ್ಛಿಸದ ಮಗಳು, ಮನೆಯಲ್ಲೇ ಬೇಕಿಂಗ್ ವ್ಯವಹಾರವನ್ನು ಶುರು ಮಾಡಿದ್ದಳು ಎಂದು ಹೇಳಿದ್ದಾರೆ. ಆದರೆ, ಶಾಕಿಂಗ್ ವಿಷಯ ಏನೆಂದರೆ, ಆರೋಪಿ ಸಿಯಾ ಬೇಕಿಂಗ್ ಬಿಜಿನೆಸ್ ಬಗ್ಗೆ ಇಲ್ಲಿಯವರೆಗೂ ಯಾರಿಗೂ ಸರಿಯಾದ ಮಾಹಿತಿಯೇ ಇಲ್ಲ ಎನ್ನಲಾಗಿದೆ.
ನ್ಯಾಯಕ್ಕಾಗಿ ಕೇತನ್ ಹೆತ್ತವರ ಬೇಡಿಕೆ
ಮೃತ ಕೇತನ್ಗೆ ನ್ಯಾಯ ಬೇಕೇ ಬೇಕು ಎಂದು ಪೋಷಕರಾದ ರಾಖಿ ಅಗರ್ವಾಲ್ ಮತ್ತು ವಿಶಾಲ್ ಅಗರ್ವಾಲ್ ಹಾಗೂ ಕುಟುಂಬಸ್ಥರು ಮೆಣದ ಬತ್ತಿಯನ್ನು ಹಿಡಿದು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪುತ್ರನನ್ನು ಕೊಂದ ಪಾತಕಿಗಳನ್ನು ನೇಣಿಗೆ ಹಾಕಬೇಕು ಎಂದು ಆಗ್ರಹಿಸಿದ್ದು, ಒಂದೇ ಒಂದು ಬಲವಾದ ಕಾರಣಗಳಿಲ್ಲದೇ, ತಮ್ಮ ಬಯಕೆಗಳಿಗೆ ಮಗನನ್ನು ಭೀಕರವಾಗಿ ಕೊಂದಿರುವುದು ಅಕ್ಷಮ್ಯ. ಇಲ್ಲಿ ಕೇತನ್ದು ಯಾವುದೇ ತಪ್ಪಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಕೇತನ್ಗೆ ಮದುವೆ ಮಾಡಿ, ನಮ್ಮ ಕುಟುಂಬಕ್ಕೆ ಸೊಸೆಯನ್ನು ಕರೆತರಬೇಕು ಎಂಬ ಆಸೆ ನಮ್ಮಲ್ಲಿ ತುಂಬಿತ್ತು. ಇದನ್ನು ಈಡೇರಿಸಿಕೊಳ್ಳಲು ಹೋಗಿ ಈಗ ಅವನನ್ನೇ ಕಳೆದುಕೊಂಡಿದ್ದೀವಿ. ನಮಗೆ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ. ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ನಮ್ಮೊಂದಿಗೆ ಎಲ್ಲರೂ ದನಿಗೂಡಿಸಿರುವುದಕ್ಕೆ ಧನ್ಯವಾದ. ಶಿಕ್ಷೆಯಾಗುವವರೆಗೂ ಜೊತೆಗೆ ನಿಲ್ಲುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಮೃತನ ತಂದೆ ಹೇಳಿದ್ದಾರೆ,(ಏಜೆನ್ಸೀಸ್).