- ಪುಣೆ ಉದ್ಯಮಿ ಕೇತನ್ ಕೊಲೆ ಕೇಸ್
- ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ
- ಆರೋಪಿ ಸಿಯಾ ಮತ್ತು ಆಕೆಯ ಬಾಯ್ಫ್ರೆಂಡ್ನನ್ನು ಗಲ್ಲಿಗೇರಿಸಿ
Ketan Murder Case: ಕೋಟಿಗಟ್ಟಲೇ ರೂಪಾಯಿ ಖರ್ಚಿನ ಅದ್ಧೂರಿ ವಿವಾಹಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ವರನನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದಿರುವ ಯುವತಿಯ ಪಾಪದ ಕೃತ್ಯಕ್ಕೆ ಇಡೀ ದೇಶವೇ ಛೀಮಾರಿ ಹಾಕುತ್ತಿದೆ. ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಸಂಚು ಹತ್ಯೆ ಪ್ರಕರಣದ ತನಿಖೆ ಚುರುಕಿನಿಂದ ಸಾಗುತ್ತಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಕಣ್ಣೀರಿಗೆ ಸದ್ಯ ಕೊನೆಯೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ, ಪೋಷಕರು ಕೇತನ್ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಮೃತ ಕೇತನ್ಗೆ ನ್ಯಾಯ ಬೇಕೇ ಬೇಕು ಎಂದು ಪೋಷಕರಾದ ರಾಖಿ ಅಗರ್ವಾಲ್ ಮತ್ತು ವಿಶಾಲ್ ಅಗರ್ವಾಲ್ ಹಾಗೂ ಕುಟುಂಬಸ್ಥರು ಮೆಣದ ಬತ್ತಿಯನ್ನು ಹಿಡಿದು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪುತ್ರನನ್ನು ಕೊಂದ ಪಾತಕಿಗಳನ್ನು ನೇಣಿಗೆ ಹಾಕಬೇಕು ಎಂದು ಆಗ್ರಹಿಸಿದ್ದು, ಒಂದೇ ಒಂದು ಬಲವಾದ ಕಾರಣಗಳಿಲ್ಲದೇ, ತಮ್ಮ ಬಯಕೆಗಳಿಗೆ ಮಗನನ್ನು ಭೀಕರವಾಗಿ ಕೊಂದಿರುವುದು ಅಕ್ಷಮ್ಯ. ಇಲ್ಲಿ ಕೇತನ್ದು ಯಾವುದೇ ತಪ್ಪಿಲ್ಲ ಎಂದಿದ್ದಾರೆ.
ಕೇತನ್ಗೆ ಮದುವೆ ಮಾಡಿ, ನಮ್ಮ ಕುಟುಂಬಕ್ಕೆ ಸೊಸೆಯನ್ನು ಕರೆತರಬೇಕು ಎಂಬ ಆಸೆ ನಮ್ಮಲ್ಲಿ ತುಂಬಿತ್ತು. ಇದನ್ನು ಈಡೇರಿಸಿಕೊಳ್ಳಲು ಹೋಗಿ ಈಗ ಅವನನ್ನೇ ಕಳೆದುಕೊಂಡಿದ್ದೀವಿ. ನಮಗೆ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ. ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ನಮ್ಮೊಂದಿಗೆ ಎಲ್ಲರೂ ದನಿಗೂಡಿಸಿರುವುದಕ್ಕೆ ಧನ್ಯವಾದ. ಶಿಕ್ಷೆಯಾಗುವವರೆಗೂ ಜೊತೆಗೆ ನಿಲ್ಲುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಮೃತನ ತಂದೆ ಹೇಳಿದರು.
ಪ್ರಸ್ತುತ ಕೇತನ್ ಕೊಲೆಗೈದ ಆರೋಪಿ ಸಿಯಾ ಗೋಯಲ್ ಬಂಧಿತಳಾಗಿದ್ದು, ಪೊಲೀಸರ ವಿಚಾರಣೆಯಲ್ಲಿ ಒಂದಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾಳೆ. ಇದರ ಸುತ್ತವೇ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದರೆ, ಅತ್ತ ಮಗನನ್ನು ಕಳೆದುಕೊಂಡ ತಾಯಿ ಮತ್ತು ಆರೋಪಿ ಪೋಷಕರ ನಡುವೆ ಆರೋಪ-ಪ್ರತ್ಯಾರೋಪಗಳ ವಾಕ್ಸಮರವೇ ನಡೆಯುತ್ತಿದೆ. ಇಬ್ಬರ ತಾಯಂದಿರೂ ತಮ್ಮದೇ ಆರೋಪಗಳನ್ನು ಮಾಡುತ್ತಿರುವುದು ಸದ್ಯ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.