Devi dayal Agarwal | ಕೇತನ್ ಅಗರ್ವಾಲ್ ಕೇಸ್‌ಗೆ ಬಿಗ್ ಟ್ವಿಸ್ಟ್!...ನಿಶ್ಚಿತಾರ್ಥ ಮಾಡಿಕೊಂಡವಳ ಕ್ರಿಮಿನಲ್ ಆಟಕ್ಕೆ ಬಲಿಯಾಯ್ತಾ ಮತ್ತೊಂದು ಜೀವ..?
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ನಿಗೂಢ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಆಘಾತಕಾರಿ ಟ್ವಿಸ್ಟ್ ಸಿಕ್ಕಿದ್ದು, ಕೇತನ್ ತಾತ ದೇವಿ ದಯಾಳ್ ಅಗರ್ವಾಲ್ ಅವರು ಪುಣೆಯ ಜುಪಿಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 71 ವರ್ಷದ ದೇವಿ ದಯಾಳ್ ಮೊಮ್ಮಗನ ಕ್ರೂರ ಹತ್ಯೆಯ ನಂತರ ತೀವ್ರ ದಿಗ್ಭ್ರಮೆಗೊಂಡಿದ್ದು, ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಶನಿವಾರ ರಾತ್ರಿ 9:45 ಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆದರೆ, ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಕುಟುಂಬಸ್ಥರು ಈ ಸಾವಿನ ಬಗ್ಗೆ ಭಿನ್ನ ಹೇಳಿಕೆ ನೀಡಿದ್ದಾರೆ. ದೇವಿ ದಯಾಳ್ ಅವರು ಕಳೆದ ಆರು ತಿಂಗಳಿನಿಂದ ಹೊಟ್ಟೆಯ ಗಡ್ಡೆ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಿಯಾ ತಂದೆ ಪ್ರವೀಣ್ ಗೋಯಲ್ ಹೇಳಿದ್ದಾರೆ.
ಭಾವುಕರಾದ ವಿಶಾಲ್ ಅಗರ್ವಾಲ್
ದೇವಿ ದಯಾಳ್ ಅಗರ್ವಾಲ್ ಈ ಹಿಂದೆ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು ಮತ್ತು ಅವರ ಆರೋಗ್ಯ ಸ್ಥಿತಿ ಮೊದಲಿನಿಂದಲೂ ಸೂಕ್ಷ್ಮವಾಗಿತ್ತು ಎಂದು ತಿಳಿದುಬಂದಿದೆ. ಇತ್ತೀಚೆಗೆ ಮೊಮ್ಮಗನ ಸಾವಿನ ಬೆನ್ನಲ್ಲೇ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ವೆಂಟಿಲೇಟರ್ ಮತ್ತು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ತಮ್ಮ ತಂದೆಯ ನಿಧನದ ನಂತರ ಕೇತನ್ ತಂದೆ ವಿಶಾಲ್ ಅಗರ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಮಿಸ್ ಯೂ ಡ್ಯಾಡ್ ಎಂದು ಬರೆದುಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕೇತನ್ ಅಗರ್ವಾಲ್ ಕೊಲೆ ಕೇಸ್!...
ಜೂನ್ 18 ರಂದು ಪುಣೆ ಸಮೀಪದ ಲೋಹಗಢ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಸಾವನ್ನಪ್ಪಿದ್ದರು. ಲೋನಾವಾಲಾ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಇದು ಕೇವಲ ಅಪಘಾತವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಕೇತನ್ ಅಗರ್ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಿಯಾ ಗೋಯಲ್ ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾಳೆ. ಹಲವರ ಜೊತೆ ಸೇರಿ ಆಕೆ ಈ ದೊಡ್ಡ ಹತ್ಯೆಯ ಪಿತೂರಿ ನಡೆಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ತನಿಖೆಯ ಭಾಗವಾಗಿ ಪುಣೆ ಗ್ರಾಮಾಂತರ ಪೊಲೀಸರು ಮತ್ತೊಬ್ಬ ಆರೋಪಿ ಚೇತನ್ ಚೌಧರಿಯನ್ನು ಲುಲ್ಲಾನಗರ ಪ್ರದೇಶದ ಮೈದಾನಕ್ಕೆ ಕರೆದೊಯ್ದಿದ್ದರು. ಅಲ್ಲಿ ಚೇತನ್ ಮತ್ತು ಸಿಯಾ ಗೋಯಲ್ ಕೊಲೆ ಮಾಡುವುದು ಹೇಗೆ ಎಂದು ಮುಂಚಿತವಾಗಿಯೇ ತಾಲೀಮು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೋಟೆಯಿಂದ ಕೇತನ್‌ನನ್ನು ಹೇಗೆ ತಳ್ಳಲಾಯಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಇತ್ತೀಚೆಗೆ ಲೋಹಗಢ್ ಕೋಟೆಯಲ್ಲಿ ಕೇತನ್ ತೂಕದ ಡಮ್ಮಿ ಬೊಂಬೆಯನ್ನು ಬಳಸಿ ಕ್ರೈಮ್ ಸೀನ್ ರಿಕ್ರೀಯೇಷನ್ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾಕ್ಷ್ಯ ಸಂಗ್ರಹ
ಕೊಲೆಯಾದ ದಿನ ಸಿಯಾ ಗೋಯಲ್ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ಆಕೆಯ ಮನೆಯಿಂದ ವಶಪಡಿಸಿಕೊಂಡಿದ್ದು, ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಇದೇ ವೇಳೆ ಪೊಲೀಸರು ಸಿಯಾ ತಂದೆ ಪ್ರವೀಣ್ ಗೋಯಲ್ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಆದರೆ ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಪೊಲೀಸರ ಜೊತೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಪ್ರವೀಣ್ ತಿಳಿಸಿದ್ದಾರೆ. ಸದ್ಯಕ್ಕೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ(ಏಜೆನ್ಸೀಸ್).