Siya Goyal And Chetan Chaudhary 
ದೇಶ

ಕ್ರಿಕೆಟ್ ಪಿಚ್ ಟು ಮರ್ಡರ್ ಸ್ಕೆಚ್!...ಕೇತನ್ ಅಗರ್ವಾಲ್ ಹತ್ಯೆಯ ಆರೋಪಿಗಳ ಲವ್​ ಸ್ಟೋರಿ ಬಿಚ್ಚಿಟ್ಟ ಪೊಲೀಸರು | Siya Goyal And Chetan Chaudhary

ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ (Siya Goyal And Chetan Chaudhary) ನಡುವೆ ಇದ್ದ ವೈಯಕ್ತಿಕ ಸಂಬಂಧವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿ ಚೇತನ್ ಚೌಧರಿ ಕ್ರಿಕೆಟ್ ಆಟಗಾರನಾಗಿದ್ದು, ಆತನಿಗೆ ಸಿಯಾ ಗೋಯಲ್ ಹಿರಿಯ ಸಹೋದರ ಸಾಹಿಲ್ ಗೋಯಲ್ ಜೊತೆ ಕ್ರಿಕೆಟ್ ಮೂಲಕ ಪರಿಚಯವಿತ್ತು. ಇದೇ ಪರಿಚಯ ಮುಂದೆ ಸಿಯಾ ಮತ್ತು ಚೇತನ್ ಹತ್ತಿರವಾಗಲು ಕಾರಣವಾಗಿದೆ ತನಿಖಾಧಿಕಾರಿಗಳ ತಿಳಿಸಿರುವುದಾಗಿ ವರದಿಯಾಗಿದೆ.
ಕ್ರಿಕೆಟ್ ಪಂದ್ಯಗಳ ವೇಳೆ ಸಾಹಿಲ್ ಜೊತೆ ಚೇತನ್ ಆಡುತ್ತಿದ್ದಾಗ, ಸಿಯಾ ಕೂಡ ತನ್ನ ಸಹೋದರನ ಜೊತೆ ಪಂದ್ಯಗಳನ್ನು ನೋಡಲು ಹೋಗುತ್ತಿದ್ದಳು. ಅಲ್ಲಿ ಇವರಿಬ್ಬರ ನಡುವೆ ಮೊದಲ ಬಾರಿಗೆ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾವಳಿ ಪಾರ್ಟಿಯಲ್ಲಿ ಬೆಳೆದ ಸ್ನೇಹ

ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ನೇಹಿತರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಸಿಯಾ ಮತ್ತು ಚೇತನ್ ಮತ್ತೆ ಭೇಟಿಯಾಗಿದ್ದರು. ಈ ಭೇಟಿಯ ನಂತರ ಇಬ್ಬರ ನಡುವಿನ ಸಂಪರ್ಕ ಹೆಚ್ಚಾಯಿತು ಎನ್ನಲಾಗಿದೆ. ಪೊಲೀಸರು ಆರೋಪಿಗಳ ಕಾಲ್ ಡಿಟೇಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಆಘಾತಕಾರಿ ಸತ್ಯಾಂಶಗಳು ಹೊರಬಂದಿವೆ. ಜನವರಿ ತಿಂಗಳಿನಿಂದ ಈ ಇಬ್ಬರ ನಡುವೆ ಬರೋಬ್ಬರಿ 2,004 ಬಾರಿ ಫೋನ್ ಕರೆಗಳು ವಿನಿಮಯವಾಗಿವೆ. ಒಟ್ಟಾರೆಯಾಗಿ ಸುಮಾರು 238 ಗಂಟೆಗಳ ಕಾಲ ಇವರಿಬ್ಬರು ಫೋನ್‌ನಲ್ಲಿ ಮಾತನಾಡಿದ್ದು, ಇಬ್ಬರ ನಡುವೆ ನಿರಂತರ ಹಾಗೂ ನಿಕಟ ಸಂಪರ್ಕ ಇರುವುದನ್ನು ಈ ದತ್ತಾಂಶಗಳು ಪುಷ್ಟೀಕರಿಸುತ್ತವೆ.

ಸಿಯಾ ಸಹೋದರನಿಗೆ 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ

ಶುಕ್ರವಾರದಂದು ಸ್ಥಳೀಯ ಪೊಲೀಸರು ಸಿಯಾ ಸಹೋದರ ಸಾಹಿಲ್ ಗೋಯಲ್‌ನನ್ನು ಠಾಣೆಗೆ ಕರೆಸಿ, ಚೇತನ್ ಮತ್ತು ಸಿಯಾ ನಡುವಿನ ಸಂಬಂಧದ ಕುರಿತು ಸುಮಾರು 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ನಾವು ಸಾಹಿಲ್‌ನನ್ನು ಬೆಳಗ್ಗೆ ವಿಚಾರಣೆಗೆ ಕರೆಸಿದ್ದೆವು ಮತ್ತು ತಡಸಂಜೆ ಮನೆಗೆ ಹೋಗಲು ಅನುಮತಿ ನೀಡಿದ್ದೇವೆ. ಸಾಹಿಲ್‌ಗೆ ಚೇತನ್ ಪರಿಚಯ ಇರುವುದರಿಂದ ಕೆಲವು ಪ್ರಮುಖ ಅಂಶಗಳನ್ನು ಕ್ರಾಸ್-ಚೆಕ್ ಮಾಡಿಕೊಳ್ಳಲು ಈ ವಿಚಾರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಅವರ ಇತರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಡಿಲೀಟ್ ಆದ ಚಾಟ್‌ಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ

ಕೊಲೆ ಪ್ರಕರಣದ ತನಿಖೆಯು ಈಗ ಡಿಜಿಟಲ್ ಸಾಕ್ಷ್ಯಗಳ ಕಡೆಗೆ ತಿರುಗಿದೆ. ಆರೋಪಿಗಳಿಬ್ಬರೂ ತಮ್ಮ ಮೊಬೈಲ್ ಫೋನ್‌ಗಳಿಂದ ವಾಟ್ಸಾಪ್ ಚಾಟ್‌ಗಳು, ಇನ್‌ಸ್ಟಾಗ್ರಾಮ್ ಸಂಭಾಷಣೆಗಳು ಸೇರಿದಂತೆ ಇಡೀ ಆನ್‌ಲೈನ್ ಚಟುವಟಿಕೆಯ ಹಿಸ್ಟರಿಯನ್ನು ಡಿಲೀಟ್ ಮಾಡಿರುವುದು ಪತ್ತೆಯಾಗಿದೆ. ಲೋಹಗಢದಲ್ಲಿ ಘಟನೆ ನಡೆಯುವ ಮುನ್ನ ಮತ್ತು ನಂತರದ ಚಾಟ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಅಳಿಸಿಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಕೇವಲ ಮೆಸೇಜ್ ಡಿಲೀಟ್ ಮಾಡದೆ, ರಿಸೈಕಲ್ ಬಿನ್ ಹಾಗೂ ಇತರೆ ಡಿಜಿಟಲ್ ಗುರುತುಗಳನ್ನೂ ಅಳಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸಂಭಾಷಣೆಯ ಟೈಮ್‌ಲೈನ್ ತಿಳಿಯಲು ಫೋನ್‌ಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಜೂನ್ 17 ರ ಕೆಫೆ ಮೀಟಿಂಗ್ ಮೇಲಿದೆ ಸಂಶಯದ ಹುತ್ತ

ಕೇತನ್ ಅಗರ್ವಾಲ್ ಸಾವನ್ನಪ್ಪುವ ಕೇವಲ ಒಂದು ದಿನದ ಮುಂಚೆ, ಅಂದರೆ ಜೂನ್ 17 ರಂದು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಭೇಟಿಯಾಗಿದ್ದರು ಎಂಬ ಮಹತ್ವದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪುಣೆಯ ಲುಲ್ಲಾನಗರ ಪ್ರದೇಶದ ಕೆಫೆಯೊಂದರಲ್ಲಿ ಇಬ್ಬರೂ ಸಂಜೆ 4:30 ರಿಂದ 5:30 ರವರೆಗೆ ಸುಮಾರು ಒಂದು ಗಂಟೆ ಕಾಲ ಒಟ್ಟಿಗೆ ಕಳೆದಿದ್ದಾರೆ. ಈ ಸಭೆಯಲ್ಲೇ ಕೊಲೆಗೆ ಸಂಬಂಧಿಸಿದ ಸ್ಕೆಚ್ ಹಾಕಲಾಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ(ಏಜೆನ್ಸೀಸ್​).