ಕೇತನ್ ಅಗರ್ವಾಲ್ ಕೊಲೆ ಪ್ರಕರಣ 
ದೇಶ

ಕೇತನ್​ ಹತ್ಯೆಗೆ ಡೀಪ್​ ರಿಸರ್ಚ್​! ತನಿಖೆಯಲ್ಲಿ ಹನಿಮೂನ್​ ಕೊಲೆಗಾತಿ ಸೋನಮ್ ರಘುವಂಶಿ ಹೆಸರು ಬಾಯ್ಬಿಟ್ಟ ಸಿಯಾ ​

ಪ್ರಮುಖ ಮುಖ್ಯಾಂಶಗಳು

  • ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಆರೋಪಿ ಸಿಯಾ ಗೋಯೆಲ್
  • ಮರ್ಡರ್​ ಕೇಸ್​ನಲ್ಲಿ ಲಾಕ್​ ಆಗಿರುವ ಸಿಯಾಳಿಂದ ಹೊರಬಿತ್ತು ಸ್ಫೋಟಕ ಸಂಗತಿ
  • ಈ ಕೊಲೆಗೆ ರಾಜ ರಘುವಂಶಿಯನ್ನು ಕೊಂದ ಕೊಲೆಗಾತಿಯೇ ಪ್ರೇರಣೆ
Siya Goyal: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿ ಸಿಯಾ ಗೋಯೆಲ್ ನೀಡಿರುವ ಹೇಳಿಕೆಗಳು ನಿಜಕ್ಕೂ ಎಂಥವರನ್ನು ಕೆರಳಿಸುತ್ತೆ. ಈ ಹೈಪ್ರೊಫೈಲ್ ಮರ್ಡರ್​ ಕೇಸ್​ನಲ್ಲಿ ಲಾಕ್​ ಆಗಿರುವ ಸಿಯಾ, ತಾನು ಸೋನಂ ರಘುವಂಶಿ ಕೇಸ್​ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾಗಿ ಹೇಳಿಕೊಂಡಿದ್ದಾಳೆ. 
ಪುಣೆ ಪೊಲೀಸರ ತೀವ್ರ ತನಿಖೆಯಲ್ಲಿ ಸ್ಫೋಟಕ ವಿಷಯವೊಂದನ್ನು ಬಾಯ್ಬಿಟ್ಟಿರುವ ಸಿಯಾ, ಹನಿಮೂನ್​ಗೆಂದು ಹೋದಾಗ ಪತಿ ರಾಜ ರಘುವಂಶಿಯನ್ನು ಬಾಯ್​ಫ್ರೆಂಡ್​ ಜೊತೆಗೂಡಿ ಬೆಟ್ಟದಿಂದ ತಳ್ಳಿದ ಸೋನಮ್​​ ರಘುವಂಶಿಯ ಕೃತ್ಯವನ್ನು ನೋಡಿಯೇ ಪ್ಲ್ಯಾನ್​ ಮಾಡಿಕೊಂಡೆವು. ಆ ಕೊಲೆ ಕೇಸ್​ನಲ್ಲಿ ಸೋನಮ್​ ಮಾಡಿದ ತಪ್ಪುಗಳನ್ನು ನಾವು ರಿಪೀಟ್​ ಮಾಡದಂತೆ ಎಚ್ಚರಿಕೆ ವಹಿಸಿದ್ದೆವು ಎಂದು ಹೇಳಿದ್ದಾಗಿ ವರದಿಯಾಗಿದೆ. 

ಪಶ್ಚಾತಾಪ ಅಥವಾ ಕಣ್ಣೀರಿಲ್ಲ

ಇನ್ನು, ತನಿಖೆಯ ಸಮಯದಲ್ಲಿ ಆಕೆಯಿಂದ ಸತ್ಯ ಸಂಗತಿಗಳನ್ನು ಕಕ್ಕಿಸಿದ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿ, ಸಿಯಾ ಗೋಯೆಲ್​ ಕೊಲೆಗೈಯುವ ಮುನ್ನ ಸಾಕಷ್ಟು ರಿಸರ್ಚ್​ ಮಾಡಿದ್ದಳು. ಸೋನಮ್​ ರಘುವಂಶಿ ಮಾಡಿದ ಮಿಸ್ಟೇಕ್​ಗಳನ್ನು ತನ್ನ ಕೃತ್ಯದಲ್ಲಿ ಮಾಡಬಾರದು ಎಂಬುದನ್ನು ತಿಳಿದಿದ್ದಳು. ಎಲ್ಲದಕ್ಕಿಂತ ಮುಖ್ಯವಾಗಿ, ಆಕೆಗೆ ಕೇತನ್ ಅಗರ್ವಾಲ್ ಜತೆಗಿನ ಮದುವೆಯಿಂದ ತಪ್ಪಿಸಿಕೊಳ್ಳಲು ಕೊಲೆಯೇ ಏಕೈಕ ದಾರಿ ಅನ್ನೋದು ತಲೆಯಲ್ಲಿ ಭದ್ರವಾಗಿ ಕೂತಿತ್ತು ಎಂದಿದ್ದಾರೆ.
ಸಿಯಾ ಕೊಲೆಗೆ ಮುಂದಾಗಲು ಯಾವುದೋ ಒಂದು ಕಾರಣ ಮಾತ್ರವಲ್ಲ. ಅವರ ಕುಟುಂಬಸ್ಥರ ನಿಲುವುಗಳು, ವಾತಾವರಣವು ಈ ಕೃತ್ಯಕ್ಕೆ ಆಕೆಯನ್ನು ಪ್ರೇರೆಪಿಸಿದೆ. ಇವರೆಗಿನ ತನಿಖೆಯಲ್ಲಿ, ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರೂ ಕೇತನ್​ರನ್ನು ಕೊಂದಿದ್ದಕ್ಕಾಗಿ ಯಾವುದೇ ಪಶ್ಚಾತಾಪ ಅಥವಾ ಕಣ್ಣೀರಿಟ್ಟಿದ್ದೇ ಆಗಲಿ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್​ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್​ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್​ನನ್ನು  ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ. 22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್​ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ್​ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ್​ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನ್​ನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್​ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).