Kerala Renaming | ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ತಿರುವನಂತಪುರಂ: ದಕ್ಷಿಣ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ರಾಜ್ಯವಾದ ಕೇರಳದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಮರುನಾಮಕರಣ (Kerala Renaming) ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ (ಫೆ-25) ಹಸಿರು ನಿಶಾನೆ ತೋರಿಸಿದ್ದು, ದಶಕಗಳ ಮಲಯಾಳಿಗಳ ಭಾಷಾ ಅಸ್ಮಿತೆಯ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಕೇರಳ ರಾಜ್ಯವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಿ; ಪ್ರಧಾನಿ ಮೋದಿ
ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವು ರಾಜ್ಯದ ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ, ಇದು ನಮ್ಮ ಅದ್ಭುತ ಸಂಸ್ಕೃತಿಯೊಂದಿಗಿನ ಸಂಪರ್ಕವನ್ನು ಬಲಪಡಿಸುವ ಪ್ರಯತ್ನಗಳಿಗೆ ಅನುಗುಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಿರ್ಣಯ ಅಂಗೀಕಾರ
ಈ ನಿರ್ಣಯವನ್ನು ಕೇರಳ ವಿಧಾನಸಭೆಯು 2024 ರ ಜೂನ್ 24 ರಂದು ಸರ್ವಾನುಮತದಿಂದ ಅಂಗೀಕರಿಸಿತು, ಇದಾದ ಬಳಿಕ ತನ್ನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತು. ವಿಧಾನಸಭೆಯ ನಿರ್ಣಯದ ಬಳಿಕ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಹೆಸರನ್ನು ಕೇರಳದಿಂದ ಕೇರಳಂ ಎಂದು ಬದಲಾಯಿಸಲು ಅನುಮೋದನೆ ನೀಡಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.
ಇತ್ತೀಚೆಗೆ ಉದ್ಘಾಟನೆಗೊಂಡ ಪ್ರಧಾನ ಮಂತ್ರಿಗಳ ನೂತನ ಕಚೇರಿ ಸೇವಾ ತೀರ್ಥದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ಇದಾಗಿದ್ದು, 2023ರಲ್ಲಿ ರಾಜ್ಯ ಸರ್ಕಾರದ ನಿರ್ಣಯವನ್ನು ಪರಿಶೀಲಿಸಿದ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿದ್ದರಿಂದ ಕೇರಳ ವಿಧಾನಸಭೆ ಎರಡನೇ ಬಾರಿಗೆ ನಿರ್ಣಯವನ್ನು ಅಂಗೀಕರಿಸಿತು.
ಸೇವಾ ತೀರ್ಥದಲ್ಲಿ ನಡೆಯುತ್ತಿರುವ ಈ ಮೊದಲ ಸಭೆಯೊಂದಿಗೆ, ಕೇಂದ್ರ ಸಚಿವ ಸಂಪುಟವು ಇಲ್ಲಿ ತೆಗೆದುಕೊಳ್ಳಲಾದ ಪ್ರತಿಯೊಂದು ನಿರ್ಧಾರವು 1.4 ಶತಕೋಟಿ ದೇಶವಾಸಿಗಳಿಗೆ ಸೇವಾ ಮನೋಭಾವದಿಂದ ಪ್ರೇರಿತವಾಗಿರುತ್ತದೆ ಮತ್ತು ರಾಷ್ಟ್ರ ನಿರ್ಮಾಣದ ವಿಶಾಲ ಗುರಿಯೊಂದಿಗೆ ಸಂಬಂಧ ಹೊಂದಿದೆ ಎಂಬ ತನ್ನ ಸಂಕಲ್ಪವನ್ನು ಪುನರುಚ್ಚರಿಸುತ್ತದೆ.
ಸಂಪುಟ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ನಮಗೆ ಸಾಂವಿಧಾನಿಕ ಮೌಲ್ಯಗಳು ಆಡಳಿತವನ್ನು ನಾಗರಿಕರ ಘನತೆ, ಸಮಾನತೆ ಮತ್ತು ನ್ಯಾಯದೊಂದಿಗೆ ಸಂಪರ್ಕಿಸುವ ನೈತಿಕ ಬದ್ಧತೆಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.
ಸಿಎಂ ವಿಜಯನ್ ಹೇಳಿದ್ದೇನು..?
ಕೇರಳಂ ಪದವು ಮಲಯಾಳಂನಲ್ಲಿ ಬಳಸಲ್ಪಡುತ್ತದೆ ಮತ್ತು ಈ ಪ್ರದೇಶದ ಇತಿಹಾಸದಲ್ಲಿ ಬೇರೂರಿದೆ ಎಂದು ಮುಖ್ಯಮಂತ್ರಿ ವಿಜಯನ್ ವಿವರಿಸಿದ್ದು, ಇದು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಹಿಂದಿನಿಂದ ಮಲಯಾಳಂ ಮಾತನಾಡುವ ಸಂಯುಕ್ತ ರಾಜ್ಯದ ಆಕಾಂಕ್ಷೆಯನ್ನು ಉಲ್ಲೇಖಿಸುತ್ತದೆ.
ಈಗಾಗಲೇ ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದ್ದು, 3 ನೇ ವಿಧಿಯ ಅಡಿಯಲ್ಲಿ ಅದನ್ನು 'ಕೇರಳಂ' ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ಕೇರಳಂ ಎಂದು ಮರುನಾಮಕರಣ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸಭೆ ಕೇಂದ್ರವನ್ನು ವಿನಂತಿಸುತ್ತದೆ ಎಂದು ವಿಜಯನ್ ಹೇಳಿದರು.
'ಕೇರಳಂ' ಹೆಸರಿನ ಹಿಂದಿದೆ ಸಿದ್ಧಾಂತ ಮತ್ತು ಸಂಸ್ಕೃತಿ
ಕೇರಳಂ ಎಂಬುದು ಮಲಯಾಳಂ ಭಾಷೆಯ ಮೂಲ ಪದ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ 'ಐಕ್ಯ ಕೇರಳಂ' ರೂಪಿಸಬೇಕೆಂಬ ಚಳುವಳಿ ನಡೆದಿತ್ತು ಎನ್ನಲಾಗಿದೆ.
ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಈ ಪ್ರದೇಶವನ್ನು 'ಕೇರಳಂ' ಎಂದೇ ಉಲ್ಲೇಖಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಉಚ್ಚಾರಣೆಯ ಸುಲಭಕ್ಕಾಗಿ ಅದು ಕೇರಳವಾಗಿ ಮಾರ್ಪಟ್ಟಿತ್ತು. ಈಗ ಅದನ್ನು ತನ್ನ ಮೂಲ ರೂಪಕ್ಕೆ ತರುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ(ಏಜೆನ್ಸೀಸ್).