ಯುವಕನ ಪ್ರಾಣ ಉಳಿಸಿದ ವೈದ್ಯರು
- ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ
- ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದವನಿಗೆ ನಡುರಸ್ತೆಯಲ್ಲೇ ಚಿಕಿತ್ಸೆ
- ಯುವಕನ ಜೀವ ಉಳಿಸಿದ ಮೂವರು ವೈದ್ಯರಿಗೆ ಮೆಚ್ಚುಗೆಗೆಳ ಮಹಾಪೂರ
ಕೊಚ್ಚಿ: ಇಂದು ದೇಶದಲ್ಲಿ ಪ್ರತಿದಿನ ಸುಮಾರು 1,264ಕ್ಕೂ ಅಧಿಕ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರದಿಗಳ ಪ್ರಕಾರ, ವರ್ಷಕ್ಕೆ ಅಂದಾಜು 1.7 ಲಕ್ಷಕ್ಕೂ ಜನರು ರಸ್ತೆ ದುರಂತಗಳಲ್ಲಿ ಉಸಿರು ಚೆಲ್ಲಿತ್ತಿರುವುದು ನಿಜಕ್ಕೂ ಅತ್ಯಂತ ದುಃಖಕರ ಸಂಗತಿ. ಅಪಘಾತ ಸಂಭವಿಸಿದಾಗ ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆ ಕೊಡಿಸಬೇಕಾದ ಸ್ಥಳೀಯರು, ಅಪಘಾತಕ್ಕೀಡಾದವರ ನರಳಾಟವನ್ನು ಮೂಕಪ್ರೇಕ್ಷಕರಂತೆ ನಿಂತು ನೋಡುವುದು ಹೇಯ. ಆದರೆ, ಇಲ್ಲೊಂದು ಪ್ರತ್ಯೇಕ ಘಟನೆಯಲ್ಲಿ ಮೂವರು ವೈದ್ಯರು ನಡುರಸ್ತೆಯಲ್ಲೇ ಓರ್ವ ಯುವಕನ ಪ್ರಾಣ ಉಳಿಸಿರುವುದು ಇದೀಗ ಹಲವರ ಮೆಚ್ಚುಗೆಗೆ ಕಾರಣವಾಗಿದೆ.
ಕೈಗೆ ಸಿಕ್ಕ ವಸ್ತುಗಳನ್ನೇ ಬಳಸಿ ಚಿಕಿತ್ಸೆ
ಯುವಕನೊಬ್ಬ ರಸ್ತೆ ಮಧ್ಯದಲ್ಲಿ ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದನ್ನು ಕಂಡ ಮೂವರು ವೈದ್ಯರು, ಆತನಿಗೆ ಸ್ಥಳದಲ್ಲೇ ತಮಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ತುರ್ತು ಶಸ್ತ್ರಚಿಕಿತ್ಸೆ ನೀಡಿದ ಮನಕಲಕುವ ಘಟನೆ ಕೇರಳದ ಎರ್ನಾಕುಲಂನ ದಕ್ಷಿಣ ಪರವೂರಿನಲ್ಲಿ ವರದಿಯಾಗಿದೆ. ಡಾ. ಮನೂಪ್, ಡಾ. ಥಾಮಸ್ ಪೀಟರ್ ಮತ್ತು ಅವರ ಪತ್ನಿ ಡಾ. ದಿಧಿಯಾ ಯುವಕನ ಪ್ರಾಣ ಉಳಿಸಿದ ಪುಣ್ಯಾತ್ಮರು.
ಕೊಲ್ಲಂ ಮೂಲದ ಲಿನು ಅಪಘಾತಕ್ಕೀಡಾದ ಯುವಕ. ಆ್ಯಕ್ಸಿಡೆಂಟ್ನಲ್ಲಿ ಯುವಕನ ಶ್ವಾಸಕೋಶ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದು, ಆತ ಉಸಿರಾಟದ ತೊಂದರೆಗೆ ಸಿಲುಕಿದ್ದ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಈ ಮೂವರು ವೈದ್ಯರು, ಲಿನು ಒದ್ದಾಟವನ್ನು ಕಂಡು ತುರ್ತು ಚಿಕಿತ್ಸೆ ಕೊಡಲು ಮುಂದಾದರು. ಅಗತ್ಯ ವೈದ್ಯಕೀಯ ಉಪಕರಣಗಳು ಲಭ್ಯವಿಲ್ಲದ ಕಾರಣ, ರೇಜರ್ ಬ್ಲೇಡ್ ಮತ್ತು ಪೇಪರ್ ಸ್ಟ್ರಾಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಿದ್ದಾಗಿ ವರದಿಯಾಗಿದೆ.
ಮಾನವೀಯತೆ, ಕರ್ತವ್ಯ ನಿಷ್ಠೆ ...
ವೈದ್ಯರ ಸಮಯಪ್ರಜ್ಞೆ, ತುರ್ತು ಚಿಕಿತ್ಸೆ ಯುವಕನ ಪ್ರಾಣವನ್ನು ಉಳಿಸಿತು. ವೈದ್ಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ, ಪ್ರಶಂಸೆಗಳ ಮಹಾಪೂರವೇ ಹರಿದುಬಂದಿವೆ. ಯುವಕನ ಮುಖ ಮತ್ತು ಇತರ ಭಾಗಗಳಿಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ. ಆರಂಭದಲ್ಲಿ, ವೈದ್ಯರು ಆಸ್ಪತ್ರೆಗೆ ಕರೆದೊಯ್ಯವ ಬಗ್ಗೆ ಯೋಚಿಸಿದರು. ಆದರೆ, ಲಿನು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದದ್ದನ್ನು ಕಂಡು, ಮೂವರು ರಸ್ತೆಬದಿಯಲ್ಲಿ ಆತನಿಗೆ ಅಗತ್ಯ ಚಿಕಿತ್ಸೆ ನೀಡಿ, ಮಾನವೀಯತೆ ಹಾಗೂ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಪ್ರಸ್ತುತ, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಲಿನು ಜತೆಯಲ್ಲೇ ಡಾ. ಮನೂಪ್ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಎರ್ನಾಕುಲಂ ವೆಲ್‌ಕೇರ್ ಆಸ್ಪತ್ರೆಯಲ್ಲಿ ಯುವಕನಿಗೆ ಹೆಚ್ಚಿನ ಹಾಗೂ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗಿದೆ. ವೈದ್ಯರ ಕಾರ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಇಂತಹ ವೈದ್ಯರು ಎಲ್ಲರಿಗೂ ಮಾದರಿ ಎಂದು ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).