ಮೃತ ಸಾವರಿಯಾ ಬಸಂತ್​(ಎಡ), ಮೃತಳ ಪೋಷಕರು(ಮಧ್ಯೆ), ಆರೋಪಿ ಸದ್ರುಲ್ 
ದೇಶ

ಉಜ್ಬೇಕಿಸ್ತಾನ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಹತ್ಯೆ! ಇಸ್ಲಾಂ ಮತಾಂತರಕ್ಕೆ ಒತ್ತಾಯವೇ ಕೊಲೆಗೆ ಕಾರಣ: ಹೆತ್ತವರ ಆರೋಪ

ಪ್ರಮುಖ ಮುಖ್ಯಾಂಶಗಳು

  • ಉಜ್ಬೇಕಿಸ್ತಾನದಲ್ಲಿ ವೈದ್ಯಕೀಯ ಕೋರ್ಸ್​ ಪಡೆಯಲು ತೆರಳಿದ್ದ ಕೇರಳ ವಿದ್ಯಾರ್ಥಿನಿ ಕೊಲೆ
  • ಸಹಪಾಠಿಯಿಂದಲೇ ಸಾವರಿಯಾ ಬಸಂತ್ ಹತ್ಯೆ
  • ಯುವತಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯ ಆರೋಪ
ಕೇರಳ: ಉಜ್ಬೇಕಿಸ್ತಾನದಲ್ಲಿ ವೈದ್ಯಕೀಯ ಕೋರ್ಸ್​ ಪಡೆಯಲು ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಸಾವರಿಯಾ ಬಸಂತ್ ತನ್ನ ಸಹಪಾಠಿಯಿಂದಲೇ ಕೊಲೆಯಾದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್​ ಸಿಕ್ಕಿದೆ.
ಮಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆರೋಪಿ ತೀವ್ರ ಒತ್ತಡ ಹೇರಿದ್ದ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಸಾವರಿಯಾ ಸಹಪಾಠಿ ಸದ್ರುಲ್ ಅನಾಮ್​ನನ್ನು ಬಂಧಿಸಲಾಗಿದೆ. ಮೃತ ಸಾವರಿಯಾ ಮತ್ತು ಆರೋಪಿ ಸದ್ರುಲ್ ಇಬ್ಬರೂ ಉಜ್ಬೇಕಿಸ್ತಾನದ ಬುಖಾರಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು.

ಅಡಿಯಿಂದ ಮುಡಿಯವರೆಗೆ ಗಾಯದ ಗುರುತುಗಳು

ಸಾವರಿಯಾ ಮೃತದೇಹವನ್ನು ಭಾರತಕ್ಕೆ ತರಲು ಉಜ್ಬೇಕಿಸ್ತಾನಕ್ಕೆ ತೆರಳಿದ್ದ ಆಕೆಯ ಮಾವ ಜನಿಶ್, ಅಲ್ಲಿನ ತನಿಖಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಸಾವರಿಯಾ ತಲೆಯಿಂದ ಕಾಲಿನವರೆಗೆ ಹಲವು ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲಿಗೆ, ಇದು ಒಂದೇ ಏಟಿಗೆ ಸಂಭವಿಸಿರುವ ಸಾವಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಸ್ನೇಹಿತರಿಂದ ಮತಾಂತರದ ಸುಳಿವು

ಆರೋಪಿ ಸದ್ರುಲ್ ಅನಾಮ್, ಸಾವರಿಯಾಳನ್ನು ಇಸ್ಲಾಂಗೆ ಮತಾಂತರ ಆಗುವಂತೆ ಪದೇ ಪದೇ ಪೀಡಿಸುತ್ತಿದ್ದ ಎಂಬ ವಿಷಯವನ್ನು ಅಲ್ಲಿನ ತನಿಖಾಧಿಕಾರಿಗಳು ಕುಟುಂಬಕ್ಕೆ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೃತಳ ಜೊತೆ ಓದುತ್ತಿದ್ದ ಸಹಪಾಠಿಗಳು ಕೂಡ ಇದೇ ವಿಷಯವನ್ನು ಹಂಚಿಕೊಂಡಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ.

ಕೇರಳದಲ್ಲಿ ದೂರು ದಾಖಲು, 2ನೇ ಪೋಸ್ಟ್‌ಮಾರ್ಟಮ್

ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಕೇರಳದ ಆಲಪ್ಪುಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತಕ್ಕೆ ಶವ ರವಾನೆಗೊಂಡ ನಂತರ ಸಾವರಿಯಾ ದೇಹದ ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಸದ್ಯ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ,(ಏಜೆನ್ಸೀಸ್).