Kerala Story-2  
ದೇಶ

ಕೇರಳ ಸ್ಟೋರಿ-2 ಚಿತ್ರಕ್ಕೆ ಪ್ರೇಕ್ಷಕರಿಲ್ಲದಿರುವುದು ಶುಭ ಸುದ್ದಿ: ರಾಹುಲ್ ಗಾಂಧಿ | Kerala Story-2

ಇಡುಕ್ಕಿ (ಕೇರಳ): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿವಾದಿತ 'ಕೇರಳ ಸ್ಟೋರಿ-2(Kerala Story-2) ಗೋಸ್ ಬಿಯಾಂಡ್' ಚಲನಚಿತ್ರದ ಬಗ್ಗೆ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. "ಈ ಚಿತ್ರವನ್ನು ಜನರು ಹೆಚ್ಚಾಗಿ ವೀಕ್ಷಿಸುತ್ತಿಲ್ಲ ಎಂಬುದು ಒಂದು ಶುಭ ಸುದ್ದಿ," ಎಂದು ಅವರು ಹೇಳಿದ್ದಾರೆ.
ಇಂದು(ಮಾ.06) ಕೇರಳದ ಇಡುಕ್ಕಿ ಜಿಲ್ಲೆಯ ಕುಟ್ಟಿಕಾನಂನಲ್ಲಿರುವ ಮೇರಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಚಲನಚಿತ್ರಗಳನ್ನು ಅಪಪ್ರಚಾರಕ್ಕೆ (Propaganda) ಬಳಸಿಕೊಳ್ಳಲಾಗುತ್ತಿದೆ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಮತ್ತು ಸಿನೆಮಾಗಳನ್ನು ಒಂದು ನಿರ್ದಿಷ್ಟ ಸಿದ್ಧಾಂತದ ಆಯುಧವನ್ನಾಗಿ ಬಳಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
"ಕೇರಳ ಸ್ಟೋರಿ-2 ಚಿತ್ರಮಂದಿರಗಳಲ್ಲಿ ಖಾಲಿ ಹೊಡೆಯುತ್ತಿದೆ ಎಂಬುದು ಉತ್ತಮ ವಿಷಯ. ಇದು ಕೇರಳದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಭಜಿಸಲು ಪ್ರಯತ್ನಿಸುವವರಿಗೆ ನೀಡಿದ ಉತ್ತರ," ಎಂದು ರಾಹುಲ್ ಹೇಳಿದರು. ಚಲನಚಿತ್ರಗಳು ಮತ್ತು ಮಾಧ್ಯಮಗಳನ್ನು ಜನರನ್ನು ವಿಭಜಿಸಲು, ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಸಮಾಜದಲ್ಲಿ ದ್ವೇಷ ಬಿತ್ತಲು 'ಅಸ್ತ್ರ'ಗಳಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು. ಕೇರಳದ ಜನರು ಒಗ್ಗಟ್ಟು ಮತ್ತು ಪ್ರೀತಿಯಿಂದ ಬದುಕುವವರು. ರಾಜ್ಯದ ಘನತೆಗೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ಇಲ್ಲಿನ ಜನರು ಸ್ವೀಕರಿಸುವುದಿಲ್ಲ ಎಂಬುದಕ್ಕೆ ಈ ಚಿತ್ರದ ವೈಫಲ್ಯವೇ ಸಾಕ್ಷಿ ಎಂದರು. ಇದೇ ಸಂದರ್ಭದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್ ಸಿದ್ಧಾಂತದ ಒತ್ತಡ ಹೆಚ್ಚುತ್ತಿದೆ ಮತ್ತು ಕುಲಪತಿಗಳ ನೇಮಕಾತಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಂವಾದದ ನಂತರ ಕಾಲೇಜಿನ ವಿದ್ಯಾರ್ಥಿಯೊಬ್ಬರೊಂದಿಗೆ ರಾಹುಲ್ ಗಾಂಧಿ ಕೇರಳದ ಸಾಂಪ್ರದಾಯಿಕ ಸಮರ ಕಲೆ 'ಕಲರಿಪಯಟ್ಟು'ನ ಕೆಲವು ಹಂತಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು,(ಏಜೆನ್ಸೀಸ್).