Cycle Protest (ಚಿತ್ರ X) 
ದೇಶ

ಅಧಿಕೃತ ಕಾರು ನಿರಾಕರಣೆ; ಕಾರ್ಯಕ್ರಮದಲ್ಲಿ ಭಾಗವಹಿಸಲು 30 ಕಿ.ಮೀ ಸೈಕಲ್ ತುಳಿದ ಪಂಚಾಯತ್ ಪ್ರೆಸಿಡೆಂಟ್! ಈ ಜಿದ್ದಿನ ಹಿಂದಿದೆ ರೋಚಕ ಕಹಾನಿ.. Cycle Protest

ತಿರುವನಂತಪುರಂ: ರಾಜಕೀಯ ನಾಯಕರು ಮತ್ತು ಜನಪ್ರತಿನಿಧಿಗಳು ಐಷಾರಾಮಿ ಕಾರುಗಳು, ಬೆಂಗಾವಲು ವಾಹನಗಳಲ್ಲಿ ಓಡಾಡುವುದನ್ನು ನಾವು ನಿತ್ಯ ನೋಡುತ್ತೇವೆ. ಆದರೆ, ಕೇರಳದ ಕೊಲ್ಲಂ ಜಿಲ್ಲೆಯ ಆದಿಚನಲ್ಲೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕರೊಬ್ಬರು ತಮಗೆ ಪಂಚಾಯತ್ ಕಾರ್ಯದರ್ಶಿಯಿಂದ ಅಧಿಕೃತ ವಾಹನ ನಿರಾಕರಿಸಲ್ಪಟ್ಟ ಆರೋಪದ ನಂತರ, ಬರೋಬ್ಬರಿ 30 ಕಿಲೋಮೀಟರ್ ಸೈಕಲ್ (Cycle Protest) ತುಳಿಯುವ ಮೂಲಕ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಆದಾಗ್ಯೂ, ಪಂಚಾಯತ್ ಕಾರ್ಯದರ್ಶಿಯ ಧೋರಣೆಯನ್ನು ಖಂಡಿಸಿ, ಫೋರ್ಟ್ ಕೊಲ್ಲಂ ಚರ್ಚ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಅವರು ಸೈಕಲ್​ ಮೂಲಕ ಪ್ರಯಾಣ ಬೆಳೆಸಿದ್ದು, ಇದೀಗ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿವಾದದ ಹಿನ್ನೆಲೆ ಏನು?

ಆದಿಚನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಡೆಯುತ್ತಿದ್ದ ಟಾರ್​-ಮಿಕ್ಸಿಂಗ್​ ಘಟಕದ ವಿಚಾರವಾಗಿ  ಪಂಚಾಯತ್ ಅಧ್ಯಕ್ಷ ಜಿನೋಜಿ ಎಡ್ವರ್ಡ್ ಮತ್ತು ಕಾರ್ಯದರ್ಶಿ ಫ್ಲೋಸಿ ಲಾಸ್ ನಡುವೆ ಇತ್ತೀಚೆಗೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ಎಡ್ವರ್ಡ್​ ಅವರ ವಾರ್ಡ್​ನಲ್ಲೇ ಈ ಕಾಮಗಾರಿ ಆಗುತ್ತಿದ್ದು, ಮಾಲಿನ್ಯದ ಹಿನ್ನಲೆಯಲ್ಲಿ ಅಧ್ಯಕ್ಷ ಜಿನೋಜಿ  ಮತ್ತು ಪಂಚಾಯತ್‌ನ ಇತರ 21 ಚುನಾಯಿತ ಸದಸ್ಯರು ಈ ಘಟಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಪಂಚಾಯತ್ ಆಡಳಿತವು ಕಾರ್ಯದರ್ಶಿಯ ಮೂಲಕ ಈ ಕಂಪನಿಗೆ 'ಸ್ಟಾಪ್ ಮೆಮೊ' ಜಾರಿಗೊಳಿಸಿತ್ತು.
ಆದಾಗ್ಯೂ, ಈ ವಿಷಯವಾಗಿ ತಮಗೂ ಮತ್ತು ಕಾರ್ಯದರ್ಶಿಗೆ ಮುನಿಸು ಉಂಟಾಗಿದ್ದರ ಹಿನ್ನಲೆಯಲ್ಲಿ  ಕಾರ್ಯದರ್ಶಿ ಫ್ಲೋಸಿ ಲಾಸ್ ಅವರು ಅಧ್ಯಕ್ಷರಿಗೆ ಅಧಿಕೃತ ವಾಹನವನ್ನು ನೀಡಲು ನಿರಾಕರಿಸಿದ್ದಾರೆ ಎಂದು ಎಡ್ವರ್ಡ್​ ಆರೋಪ ಮಾಡಿದ್ದಾರೆ.

ಇದೇ ನನ್ನ ಅಧಿಕೃತ ವಾಹನ – ಜಿನೋಜಿ ಎಡ್ವರ್ಡ್

ಆದಾಗ್ಯೂ, ಫೋರ್ಟ್​ ಕೊಲ್ಲಂ ಚರ್ಚ್​ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜ್ಯ ಸಚಿವೆ ಬಿಂದು ಕೃಷ್ಣ ಮತ್ತು ಕೊಲ್ಲಂ ಮೇಯರ್ ಎ.ಕೆ. ಹಫೀಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಅಲ್ಲಿಗೆ ಸೈಕಲ್​ ತುಳಿದುಕೊಂಡು ಆಗಮಿಸಿದ ಜಿನೋಜಿ ಎಡ್ವರ್ಡ್​, ಇಂದು ನಾನು ನನ್ನ ಅಧಿಕೃತ ವಾಹನದಲ್ಲೇ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಅದುವೇ ಈ ಸೈಕಲ್. ಅಧಿಕೃತ ಸರ್ಕಾರಿ ಕಾರ್ಯಕ್ರಮವಲ್ಲ ಎಂಬ ನೆಪವೊಡ್ಡಿ ಕಾರ್ಯದರ್ಶಿ ನನಗೆ ವಾಹನ ಸೌಲಭ್ಯವನ್ನು ನಿರಾಕರಿಸಿದರು. ಅವರ ಈ ಜನವಿರೋಧಿ ನಿರ್ಧಾರವನ್ನು ಪ್ರತಿಭಟಿಸಲು ನಾನು ಆದಿಚನಲ್ಲೂರಿನಿಂದ ಕೊಲ್ಲಂವರೆಗಿನ ಸೈಕಲ್ ಮೂಲಕವೇ ಕ್ರಮಿಸಿದ್ದೇನೆ ಎಂದು ಹೇಳಿದರು.

ಸಚಿವೆಗೆ ದೂರು: ಮುಂದಿನ ನಡೆ?

ತಮಗೆ ಆಗಿರುವ ಅನ್ಯಾಯವನ್ನು ಎತ್ತಿ ತೋರಿಸಲು ಎಡ್ವರ್ಡ್​ ದೂರು ನೀಡಲು ಮುಂದಾಗಿದ್ದು, ಕಾರ್ಯಕ್ರಮದ ವೇದಿಕೆಯಲ್ಲೇ ಉಪಸ್ಥಿತರಿದ್ದ ರಾಜ್ಯ ಸಚಿವೆ ಬಿಂದು ಕೃಷ್ಣ ಅವರಿಗೆ ಅಧಿಕೃತವಾಗಿ ದೂರು ಪತ್ರ ಸಲ್ಲಿಸಿ ಪಚಾಯತ್​ ಕಾರ್ಯದರ್ಶಿ ಫ್ಲೋಸಿ ಲಾಸ್ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ (ಏಜೆನ್ಸೀಸ್​).