ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮುನಂಬಮ್‌ನಲ್ಲಿ ಭರ್ಜರಿ ಜಯ ಸಾಧಿಸಿದ್ದು, ರಾಜ್ಯ ವಕ್ಫ್ ಮಂಡಳಿಗೆ ಸಂಬಂಧಿಸಿದ ದೀರ್ಘಕಾಲದ ವಿವಾದದ ಕೇಂದ್ರಬಿಂದುವಾಗಿರುವ ವಾರ್ಡ್‌ನಲ್ಲಿ ಇದು ಹೊಸ ಅಧ್ಯಾಯವಾಗಿದೆ. ತಮ್ಮ ಸ್ವಂತ ಭೂಮಿಯ ಮೇಲೆ ಅಕ್ರಮ ಹಕ್ಕು ಸಾಧಿಸಿದ್ದಾರೆ ಎಂಬ ಆರೋಪದ ಮೇಲೆ ಸುಮಾರು 500 ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳ ವರ್ಷಪೂರ್ತಿ ಪ್ರತಿಭಟನೆಗಳ ನಡುವೆ ಈ ಫಲಿತಾಂಶ ಬಂದಿರುವುದು ಗಮನಾರ್ಹ ಸಂಗತಿ.
ಈ ಗೆಲುವಿನ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ ಜೋಸೆಫ್, ಇದು ಎನ್‌ಡಿಎ ಪಾಲಿಗೆ ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ. ವಕ್ಫ್ ವಿರುದ್ಧ ಹೋರಾಡುವಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಮುನಂಬಮ್ ಜನರೊಂದಿಗೆ ನಿಂತವು, ಈಗ ಬಿಜೆಪಿಯನ್ನು ತಮ್ಮ ಜನಾದೇಶವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಜೋಸೆಫ್ ಟ್ವೀಟ್ ಮಾಡಿದ್ದಾರೆ.
ಮುನಂಬಮ್‌ನಲ್ಲಿನ ಬಿಜೆಪಿಯ ಗೆಲುವು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಭಾರಿ ಉತ್ತೇಜನ ನೀಡಲಿದ್ದು, ಇಲ್ಲಿ ತನ್ನ ಬಲವನ್ನು ವೃದ್ದಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕ್ಷೇತ್ರವಾದ ತಿರುವನಂತಪುರಂ ಕಾರ್ಪೊರೇಷನ್‌ನಲ್ಲೂ ಸಹ ಕೇಸರಿ ಪಾಳಯ ಮುನ್ನಡೆ ಸಾಧಿಸಿದೆ.
ತಿರುವನಂತಪುರಂನಲ್ಲೂ ಕೇಸರಿ ಕಲರವ
ಒಟ್ಟು 101 ವಾರ್ಡ್‌ಗಳನ್ನು ಹೊಂದಿರುವ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಮುನ್ನಡೆ ಸಾಧಿಸಿದ್ದು, ಕೇರಳ ರಾಜ್ಯ ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಎನ್‌ಡಿಎ 29 ವಾರ್ಡ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಇತ್ತ ಮುಖ್ಯಮಂತ್ರಿ ಪಿ ವಿಜಯನ್ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) 15 ವಾರ್ಡ್, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 12 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.
2020 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಎಲ್‌ಡಿಎಫ್, ಎನ್‌ಡಿಎ ಮತ್ತು ಯುಡಿಎಫ್ ಕ್ರಮವಾಗಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ 52, ಎನ್‌ಡಿಎ ಮತ್ತು ಯುಡಿಎಫ್ 33 ಮತ್ತು 10 ವಾರ್ಡ್‌ಗಳನ್ನು ಗೆದ್ದಿದ್ದವು(ಏಜೆನ್ಸೀಸ್).