ಲಚ್ಚಣ್ಣ (ಎಡ), ಇಸ್ಮಾಯಿಲ್ (ಬಲ)
- 35 ವರ್ಷಗಳ ಹಿಂದೆ ಕಷ್ಟಕ್ಕೆ ಮಿಡಿದ ಸಹೋದ್ಯೋಗಿಗೆ ಬಡ್ಡಿ ಸಮೇತ ಸಾಲ ತೀರಿಸಿದ ಸಹೋದ್ಯೋಗಿ
- ಹಣ ಕೊಟ್ಟ ಸ್ನೇಹಿತನೇ ಅದನ್ನು ಮರೆತಿದ್ದರೂ ಹುಡುಕಿ ಸಾಲ ತೀರಿಸಿದ ಮಾನವೀಯ ವ್ಯಕ್ತಿ ಈತ
- 1,000 ರೂ.ಗೆ ಬಡ್ಡಿ ಸೇರಿಸಿ ಈತ ಕೊಟ್ಟ ಹಣವೆಷ್ಟು ಗೊತ್ತಾ?
ತೆಲಂಗಾಣ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂದು ಅನೇಕ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಗ್ರಾಹಕರ ಕಣ್ಣಿಗೆ ಬೀಳುವಂತೆ ದೊಡ್ಡದಾಗಿ ಹಾಕಿಸಿರುತ್ತಾರೆ. ಹಿಂಗಾದರೂ ಸಾಲ ಕೇಳದೆ ದುಡ್ಡ ಕೊಟ್ಟು ಹೋಗಲಿ ಎಂದು ಮನಸ್ಸಲೇ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇನ್ನು ಸ್ನೇಹಿತರ ಬಳಿ ಹಣ ಕೇಳಿದರೆ, ಕೊಟ್ಟರೆ ವಾಪಾಸ್ ಬರುವುದೇ ಎಂದು ಚಿಂತಿಸುವ ಅದೆಷ್ಟೋ ಮಂದಿ, ಇದ್ದರೂ ಇಲ್ಲ ಎನ್ನುತ್ತಾರೆ. ಆದರೆ, ಕೆಲವರಂತು ದುಡ್ಡು ಪಡೆದ ಎರಡು ದಿನಕ್ಕೆ ಸ್ನೇಹ, ಸಂಬಂಧವನ್ನು ಕೇವಲ ಹಣಕ್ಕಾಗಿ ಕಡಿದು, ಕಣ್ಣಿಗೆ ಕಾಣದಂತೆ ತಲೆಮರಿಸಿಕೊಂಡು ಹೋಗುತ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಸುಮಾರು 35 ವರ್ಷಗಳೇ ಕಳೆದರೂ ತನ್ನ ಕಷ್ಟಕಾಲದಲ್ಲಿ ಸಹಾಯ ಮಾಡಿದ ಸ್ನೇಹಿತನಿಗೆ ಹುಡುಕಿಕೊಂಡು ಬಂದು ಬಡ್ಡಿ ಸಮೇತ ಸಾಲ ತೀರಿಸಿದ ಘಟನೆ ನಿಜಕ್ಕೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಕೇರಳದ ಈ ವ್ಯಕ್ತಿ, 1991ರಲ್ಲಿ ತಮ್ಮ ಸ್ನೇಹಿತನ ಬಳಿ ಪಡೆದಿದ್ದ 1000 ರೂ. ಸಾಲವನ್ನು ತೀರಿಸಲು ಅವರನ್ನು ಹುಡುಕಿಕೊಂಡು ಬಂದಿದ್ದಾರೆ. ಆದರೆ, ಅವರ ಕುರಿತಂತೆ ಯಾವುದೇ ಸುಳಿವು ಇವರಿಗೆ ಸಿಕ್ಕಿಲ್ಲ. ಮನೆಯ ವಿಳಾಸಕ್ಕೂ ಪರದಾಡಿದ್ದಾರೆ. ಆದರೂ, ಪ್ರಯೋಜನವಾಗಲಿಲ್ಲ. ಇಲ್ಲಿಗೆ, ಅಯ್ಯೋ ಬಿಡು ಹೋದರೆ ಹೋಯ್ತು ಏನು ಮಾಡೋದಿಕ್ಕೆ ಆಗಲ್ಲ ಎಂದು ಸುಮ್ಮನಾಗದ ಇವರು, ಕಡೆಗೂ ಸ್ನೇಹಿತನನ್ನು ಹುಡುಕಿ ಸಾಲದ ಹಣಕ್ಕೆ ಬಡ್ಡಿ ಸೇರಿಸಿ ಹಿಂತಿರುಗಿಸಿದ್ದಾರೆ. ಈ ಮೂಲಕ ಮಾನವೀಯತೆ ಇನ್ನೂ ಬದುಕಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ವ್ಯಕ್ತಿಯನ್ನು ಕೇರಳದ ಇಸ್ಮಾಯಿಲ್ ಎಂದು ಹೇಳಲಾಗಿದೆ. ಜುಲೈ 9ರಂದು ತೆಲಂಗಾಣದ ಜಗತ್ಯಾಲ ಜಿಲ್ಲೆಯ ಧರ್ಮಪುರಿಗೆ ಬಂದು ತಮ್ಮ ಹಳೆಯ ಸ್ನೇಹಿತ ಎಡ್ಲಾ ಲಚ್ಚಣ್ಣ ಅವರ ಕುಟುಂಬಕ್ಕೆ 25,000 ರೂ. ಹಣವನ್ನು ಹಿಂತಿರುಗಿಸುವ ಮೂಲಕ 35 ವರ್ಷಗಳ ಹಿಂದಿನ ಮಾತನ್ನು ಕೊನೆಗೂ ಉಳಿಸಿಕೊಂಡಿದ್ದಾರೆ. ಇದು ಅವರ ಇಡೀ ಕುಟುಂಬಕ್ಕೆ ಒಂದು ನಿಮಿಷ ಗೊಂದಲ ಮೂಡಿಸಿದ್ದು ಉಂಟು. ಈ ಅಪರೂಪದ ಸ್ನೇಹ, ಪ್ರಾಮಾಣಿಕತೆಯ ರೋಚಕ ಕಥೆಯ ಹಿನ್ನೆಲೆ ಹೀಗಿದೆ ನೋಡಿ.
ಸೌದಿ ಅರೇಬಿಯಾದಲ್ಲಿ ಚಿಗುರಿದ ಸ್ನೇಹ
1991ರಲ್ಲಿ ಇಸ್ಮಾಯಿಲ್ ಮತ್ತು ಲಚ್ಚಣ್ಣ ಇಬ್ಬರೂ ಸೌದಿ ಅರೇಬಿಯಾದ ಅಬ್ಕೈಕ್‌ನಲ್ಲಿ ಉದ್ಯೋಗ ಹುಡುಕಿಕೊಂಡಿದ್ದರು. ಇಬ್ಬರೂ ಇತರ ಮೂವರು ವಲಸೆ ಕಾರ್ಮಿಕರೊಂದಿಗೆ ಸುಮಾರು ಐದು ವರ್ಷಗಳ ಕಾಲ ಒಂದೇ ರೂಮಿನಲ್ಲಿ ವಾಸವಿದ್ದರು. ಪ್ರತಿದಿನ ಸಂಜೆ ಜೊತೆಯಾಗಿ ಅಡುಗೆ ಮಾಡಿ, ಊಟ ಮಾಡುತ್ತಿದ್ದರ ನಡುವೆ ಆಳವಾದ ಸ್ನೇಹ ಬೆಳೆದಿತ್ತು.
ಇದೇ ಸಮಯದಲ್ಲಿ ಇಸ್ಮಾಯಿಲ್ ಅವರು ಲಚ್ಚಣ್ಣ ಬಳಿ 120 ಸೌದಿ ರಿಯಾಲ್ (ಆಗಿನ ಕಾಲಕ್ಕೆ ಸುಮಾರು 1,000 ರೂ.) ಸಾಲವನ್ನು ಪಡೆದಿದ್ದರು. ಹಣ ತೆಗೆದುಕೊಳ್ಳುವ ಮುನ್ನ ಸಮಯಕ್ಕೆ ಸರಿಯಾಗಿ ಹಣವನ್ನು ವಾಪಾಸ್ ಮಾಡುವುದಾಗಿ ಮಾತು ಕೊಟ್ಟು, ಹಣ ಸ್ವೀಕರಿಸಿದ್ದರು. ಆದರೆ, ಸಾಲ ಕೊಟ್ಟ ಕೆಲವೇ ದಿನಗಳಲ್ಲಿ ಲಚ್ಚಣ್ಣ ಭಾರತಕ್ಕೆ ವಾಪಾಸ್ ಆದರು. ಆ ಕಾಲದಲ್ಲಿ ಮೊಬೈಲ್ ಫೋನ್‌ಗಳು ಅಥವಾ ಸಾಮಾಜಿಕ ಜಾಲತಾಣಗಳು ಇಲ್ಲದ ಕಾರಣ, ಇಬ್ಬರ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.
ಸಣ್ಣ ಮೊತ್ತವಾದರೂ ಇಸ್ಮಾಯಿಲ್ ಮಾತ್ರ ತಮ್ಮ ಸ್ನೇಹಿತನಿಗೆ ಕೊಟ್ಟಿದ್ದ ಮಾತನ್ನು ಮರೆತಿರಲಿಲ್ಲ. 35 ವರ್ಷಗಳ ಬಳಿಕ ಲಚ್ಚಣ್ಣ ಅವರನ್ನು ಹುಡುಕಿ ಭಾರತಕ್ಕೆ ಬಂದ ಅವರು, ಹೇಗಾದರೂ ಮಾಡಿ ಸ್ನೇಹಿತನಿಗೆ ಹಣ ವಾಪಾಸ್ ಕೊಟ್ಟರೆ ಸಾಕು ಎಂದು ಫೋನ್ ನಂಬರ್ ಮತ್ತು ಮನೆ ವಿಳಾಸಕ್ಕೆ ಪ್ರಯತ್ನಿಸಿದರು. ಆದರೆ, ಇದ್ಯಾವುದು ಸಿಗಲಿಲ್ಲ. ಇಷ್ಟಾದರೂ ಹತಾಶೆಗೊಳ್ಳದೆ, ಲಚ್ಚಣ್ಣ ಅವರು ಧರ್ಮಪುರಿ ಎಂಬ ಊರಿಗೆ ಸೇರಿದವರು ಎಂಬ ಒಂದೇ ಒಂದು ಹಳೆಯ ನೆನಪಿನಿಂದ ಅಲ್ಲಿಗೆ ಹುಡುಕಿಕೊಂಡು ಹೋದರು.
ವಾಟ್ಸಾಪ್ ಕಾಲ್ ಮೂಲಕ ಭೇಟಿ!
ಇಸ್ಮಾಯಿಲ್ ಅವರು ಆನ್‌ಲೈನ್ ಸರ್ಚ್‌ಗಳ ಮೂಲಕ ಧರ್ಮಪುರಿ ಪಟ್ಟಣ ಎಲ್ಲಿದೆ ಎಂದು ಪತ್ತೆ ಹಚ್ಚಿ, ಅಲ್ಲಿಗೆ ಹೋದರು. ಸ್ಥಳೀಯ ಜನರ ಸಹಾಯದಿಂದ ಲಚ್ಚಣ್ಣ ಅವರ ಮನೆ ಎಲ್ಲಿದೆ ಎಂಬುದನ್ನು ಕಡೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಪ್ರಸ್ತುತ ಲಚ್ಚಣ್ಣ ಅವರು ಮತ್ತೆ ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿರುವ ಕಾರಣ, ಇಸ್ಮಾಯಿಲ್ ಅವರ ಕುಟುಂಬಸ್ಥರಿಗೆ ಬಡ್ಡಿ ಸಮೇತ 25,000 ರೂ. ಹಣವನ್ನು ಹಸ್ತಾಂತರಿಸಿದರು. ಬಳಿಕ ಬಹುಕಾಲದ ಸ್ನೇಹಿತನ ಜೊತೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲಿ ಮಾತನಾಡಿ, ತಮ್ಮಿಬ್ಬರ ಹಳೆಯ ನೆನಪುಗಳನ್ನು ಹಂಚಿಕೊಂಡರು.
ನಿಜಕ್ಕೂ ಮಹಾನ್ ಪ್ರಾಮಾಣಿಕ
ಇಸ್ಮಾಯಿಲ್ ಅವರ ಈ ಗುಣ ನೆನೆದು ಭಾವುಕರಾದ ಲಚ್ಚಣ್ಣ, "35 ವರ್ಷಗಳ ಹಿಂದೆ ನಾನು ಕೊಟ್ಟಿದ್ದ ಕೇವಲ 120 ರಿಯಾಲ್‌ಗೆ ಅವರು 25,000 ರೂ. ಹಣವನ್ನು ಹೇಗೆ ಲೆಕ್ಕ ಹಾಕಿ ತಂದಿದ್ದಾರೋ ನನಗೆ ಗೊತ್ತಿಲ್ಲ. ಬಹುಶಃ ಇಷ್ಟು ವರ್ಷಗಳ ಬಡ್ಡಿಯನ್ನು ಸೇರಿಸಿ ಕೊಟ್ಟಿರಬಹುದು. ನಿಜಕ್ಕೂ ಆತ ಅತ್ಯಂತ ಪ್ರಾಮಾಣಿಕ ಮತ್ತು ಒಳ್ಳೆಯ ಮನಸ್ಸಿನ ವ್ಯಕ್ತಿ. ಇದು ನಮ್ಮ ಒಳ್ಳೆಯ ಸ್ನೇಹಕ್ಕೆ ಅದ್ಭುತ ಸಾಕ್ಷಿ" ಎಂದು ಲಚ್ಚಣ್ಣ ಹೇಳಿದ್ದಾರೆ.
ಕಾಲ ಬದಲಾದಂತೆ ಮನುಷ್ಯರ ನಡವಳಿಕೆ, ವ್ಯಕ್ತಿತ್ವ, ಮಾತಿನ ರೀತಿ ಎಲ್ಲವೂ ಬದಲಾಗುತ್ತೆ ಎಂದು ಹೇಳುವ ಈ ಕಾಲಘಟ್ಟದಲ್ಲಿ, ಮನುಷ್ಯರ ನಡುವಿನ ನಂಬಿಕೆ ಮತ್ತು ಭರವಸೆ, ಮಾನವೀಯತೆ ಇನ್ನೂ ಜೀವಂತ ಎಂಬುದಕ್ಕೆ ಈ ಇಬ್ಬರು ಸ್ನೇಹಿತರ 35 ವರ್ಷಗಳ ಸ್ಟೋರಿಯೇ ಜ್ವಲಂತ ಸಾಕ್ಷಿ ಎನ್ನಬಹುದು,(ಏಜೆನ್ಸೀಸ್).