ತಿರುವನಂತಪುರಂ: ಅಡುಗೆ ಎಣ್ಣೆ, ಹಾಲು, ಪೆಟ್ರೋಲ್, ಡಿಸೇಲ್ ಅಥವಾ ಹಣ್ಣು-ತರಕಾರಿ ತುಂಬಿದ ಲಾರಿ ಅಥವಾ ವಾಹನಗಳು ಏನಾದರೂ ಅಪಘಾತಕ್ಕೀಡಾದರೆ, ಅಲ್ಲಿ ಯಾರಿಗೆ ಏನಾಯಿತೋ? ಯಾರಿನ್ನು ಜೀವಂತವಾಗಿದ್ದಾರೆ ಎಂದು ನೋಡುವ ಬದಲು, ನಮ್ಮ ಜನ ಮೊದಲು ಮಾಡುವ ಕೆಲಸವೇ, ಅಲ್ಲಿ ಸಿಗುವ ಪುಕ್ಕಟೆ ವಸ್ತುಗಳನ್ನು ದೋಚುವುದು. ಆದರೆ, ಇಲ್ಲೊಂದು ಘಟನೆ ಮಾತ್ರ ಅದಕ್ಕೆ ತದ್ಧ್ವಿರುದ್ಧವಾಗಿ ನಡೆದುಕೊಂಡಿರುವುದು ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಕೇರಳದ ತಿರುವನಂತಪುರಂ ಜಿಲ್ಲೆಯ ಪಳ್ಳಿಚಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರ ಗುಂಪೊಂದು ಸಂಕಷ್ಟದಲ್ಲಿದ್ದ ವಾಹನ ಚಾಲಕನಿಗೆ ನೆರವಾಗುವ ಮೂಲಕ ಮಾನವೀಯತೆ ಮತ್ತು ಒಗ್ಗಟ್ಟಿನ ಸಂದೇಶ ಸಾರಿರುವುದು ಅಪರೂಪದಲ್ಲೇ ಅಪರೂಪದ ಘಟನೆ ಎನ್ನುವಂತಾಗಿದೆ. ಅನಾನಸ್ ಹಣ್ಣುಗಳನ್ನು ತುಂಬಿಕೊಂಡು ಸಾಗುತ್ತಿದ್ದ ವಾಹನ ರಸ್ತೆಯಲ್ಲಿ ಉರುಳಿಬಿದ್ದದ್ದನ್ನು ಕಂಡ ಸ್ಥಳೀಯರು, ಮೊದಲು ಮಾಡಿದ ಕೆಲಸವೇ ಗಾಡಿಯನ್ನು ಒಟ್ಟಾಗಿ ಮೇಲೆತ್ತುವುದು. ತದನಂತರ, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣ್ಣುಗಳನ್ನು ಹೆಕ್ಕಿ, ವಾಪಾಸ್ ವ್ಯಾನ್ಗೆ ಲೋಡ್ ಮಾಡಿದ್ದು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರ ಕಾರ್ಯಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಅಪಘಾತ ಕಂಡ ಕೂಡಲೇ ಒಟ್ಟಾಗಿ ವಾಹನವನ್ನು ಮೇಲಕ್ಕೆತ್ತಿ, ನಿಧಾನವಾಗಿ ತಳ್ಳುತ್ತಾ ಮತ್ತೆ ಸರಿಯಾದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಬಳಿಕ ವ್ಯಾನ್ನಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣ್ಣುಗಳನ್ನು ಒಂದೊಂದಾಗಿ ಆರಿಸಿ ಮತ್ತೆ ವಾಹನಕ್ಕೆ ಲೋಡ್ ಮಾಡಿದ್ದಾರೆ. ಇದರಿಂದ ವಾಹನದ ಮಾಲೀಕನಿಗೆ ಆಗಬಹುದಾಗಿದ್ದ ನಷ್ಟವನ್ನು ತಗ್ಗಿಸಿ, ಮಾನವೀಯತೆ ತೋರಿದ್ದಾರೆ.
ಇದೊಂದು ಘಟನೆ ಅಂತಲ್ಲ! ಎಲ್ಲೇ ಇಂತಹ ಘಟನೆಗಳು ಸಂಭವಿಸಿದರೂ ಜನರು ಮೊದಲು ಮಾನವೀಯತೆ ತೋರುವುದನ್ನು ಕಲಿಯಬೇಕು. ಕೇವಲ ಮೂಕಪ್ರೇಕ್ಷಕರಂತೆ ನಿಂತಲ್ಲೇ ನಿಂತು, ಇಡೀ ಘಟನೆ ನೋಡುವುದು, ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರ್ತಿಸುವುದು, ವಾಹನಗಳಲ್ಲಿರುವ ಲೋಡ್ಗಟ್ಟಲೇ ಐಟಂಗಳನ್ನು ಕ್ಷಣಮಾತ್ರದಲ್ಲಿ ದೋಚುವುದನ್ನು ಬಿಟ್ಟು ಸಹಾಯ ಮಾಡುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು,(ಏಜೆನ್ಸೀಸ್).