ರಾಹುಲ್ ಗಾಂಧಿ ಮತ್ತು ಸಿಎಂ ಪಿಣರಾಯಿ ವಿಜಯನ್ 
ದೇಶ

ಕೇರಳ ಚುನಾವಣೆ; ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್; ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ | CM Pinarayi Vijayan

ತಿರುವನಂತಪುರಂ: ಮುಂದಿನ ತಿಂಗಳು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ ಆಡಳಿತರೂಢ ಎಲ್​ಡಿಎಫ್​ ಮತ್ತು ಯುಡಿಎಫ್​ ನಡುವೆ ಮಾತಿನ ಸಮರ ರಂಗೇರಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಇತರೆ ವಿರೋಧ ಪಕ್ಷದ ನಾಯಕರನ್ನು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿವೆ ಮತ್ತು ವಿಚಾರಣೆಗೆ ಕರೆದು ಪ್ರಶ್ನಿವೆ, ಆದರೆ ಕೇರಳ ಸಿಎಂ ವಿಜಯನ್ ಅವರನ್ನು ಮಾತ್ರ ತನಿಖಾ ಸಂಸ್ಥೆಗಳು ಟಚ್ ಮಾಡಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದದಲ್ಲಿ ತೊಡಗಿರುವ ಗುಂಪುಗಳ ಬೆಂಬಲವನ್ನು ಪಡೆಯುತ್ತಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಯಾವುದೇ ರೀತಿಯ ಕೋಮುವಾದವನ್ನು ವಿರೋಧಿಸುತ್ತದೆ. ಕೋಮು ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಗುಂಪಿನ ಬೆಂಬಲವನ್ನು ಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಯಾವುದೇ ದೋಷವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡ್ತಿರುವ ಆರೋಪ ಯಾವುದೇ ಪರಿಣಾಮ ಬೀರಲ್ಲ ಎಂದಿದ್ದಾರೆ (ಏಜೆನ್ಸೀಸ್).