ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿ.ಡಿ. ಸತೀಶನ್
ಕೇರಳ: ಇಂದು ಮೇ.4 ರಂದು ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದ್ದು, ಇಡೀ ದೇಶದ ಗಮನ ಇಂದು ಈ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಮೇಲೆ ನೆಟ್ಟಿದೆ.
140 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇರಳ (Kerala Election Results) ರಾಜ್ಯದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸದ್ಯಕ್ಕೆ ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ 96 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ಡಿಎ ಹಾಗೂ ಇತರರು ಕೇವಲ 5 ಕ್ರೇತ್ರಗಳಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿವೆ.
ಸಿಎಂಗೆ ಹಿನ್ನಡೆ
ಕೇರಳದ ಮುಖ್ಯಮಂತ್ರಿ ಹಾಗೂ ಧರ್ಮದಂ ವಿಧಾನಸಭಾ ಕ್ಷೇತ್ರದ ಸ್ಪರ್ಧಿಯಾಗಿರುವ ಪಿಣರಾಯಿ ವಿಜಯನ್ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎಂದು ತಿಳಿದು ಬರುತ್ತಿದೆ. ಇವರ ಜೊತೆಗೆ 12 ಜನ ಕ್ಯಾಬಿನೆಟ್ ಸದಸ್ಯರು ಸಹ ಹಿಮ್ಮುಖ ಚಲನೆಯಲ್ಲಿದ್ದಾರೆ.
2021 ರ ಚುನಾವಣೆ
2021ರ ಕೇರಳ ವಿಧಾನಸಭಾ ಚುನಾವಣೆಯು ಏಪ್ರಿಲ್ 6, 2021 ರಂದು ಒಂದೇ ಹಂತದಲ್ಲಿ ನಡೆಯಿತು ಮತ್ತು ಮೇ 2 ರಂದು ಫಲಿತಾಂಶ ಪ್ರಕಟವಾಯಿತು. ಈ ಚುನಾವಣೆಯು ಕೇರಳದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ದಾಖಲೆಯನ್ನು ಬರೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ (LDF), ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ನಾಲ್ಕು ದಶಕಗಳ ಕಾಲ ಕೇರಳದಲ್ಲಿದ್ದ 'ಪರ್ಯಾಯ ಸರ್ಕಾರ'ದ ಸಂಪ್ರದಾಯವನ್ನು ಮುರಿಯಿತು.
ಒಟ್ಟು 140 ಸ್ಥಾನಗಳಲ್ಲಿ ಎಲ್‌ಡಿಎಫ್ 99 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 41 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ವಿಶೇಷವೆಂದರೆ, ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (BJP) ತನ್ನ ಏಕೈಕ ಸ್ಥಾನವನ್ನು ಕಳೆದುಕೊಂಡು ಶೂನ್ಯಕ್ಕೆ ಕುಸಿದಿತ್ತು,(ಏಜನ್ಸೀಸ್).