Kerala Election | ಕೇರಳ ಬಿಜೆಪಿ ಎರಡನೇ ಪಟ್ಟಿ ರಿಲೀಸ್
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣಾ (Kerala Election) ಕಣ ರಂಗೇರುತ್ತಿದ್ದು, ಬಿಜೆಪಿ ಗುರುವಾರ (ಮಾರ್ಚ್ 19) ತನ್ನ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಮೂಲಕ ಕೇರಳದ ಆಡಳಿತಾರೂಢ ಎಲ್‌ಡಿಎಫ್‌ಗೆ ಪ್ರಬಲ ಪೈಪೋಟಿ ನೀಡಲು ಕೇಸರಿ ಪಕ್ಷ ಸಜ್ಜಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂ ಕ್ಷೇತ್ರದಲ್ಲಿ ಕೆ. ರಂಜಿತ್ರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ನೇರ ಸವಾಲು ಹಾಕಿದೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಮಿಜೋರಾಂನ ಮಾಜಿ ರಾಜ್ಯಪಾಲರಾದ ಕುಮ್ಮನಂ ರಾಜಶೇಖರನ್ ಆರನ್ಮುಲಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಾಬಿನ್ ರಾಧಾಕೃಷ್ಣನ್: ಕುಂದರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಅಶ್ವಿನಿ ಎಂ.ಎಲ್: ಕಾಸರಗೋಡು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಬಿ. ಗೋಪಾಲಕೃಷ್ಣನ್ (ವಕೀಲರು): ಗುರುವಾಯೂರು ಕ್ಷೇತ್ರ.
ಪಿ.ಆರ್. ಶಿವಶಂಕರ್: ಎರ್ನಾಕುಲಂ ಕ್ಷೇತ್ರ.
ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಲಾಗಿದ್ದು, ಇದರೊಂದಿಗೆ ಪಕ್ಷದ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಈ ಬಾರಿ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ.
ರಾಜಶೇಖರನ್ ಚುನಾವಣಾ ಸವಾಲು
ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಅವರಿಗೆ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಶಶಿ ತರೂರ್ ವಿರುದ್ಧ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ಕ್ಷೇತ್ರದಿಂದ ಸೋಲನುಭವಿಸಿದ್ದ ಅವರಿಗೆ, ಈ ಬಾರಿ ಗೆಲುವು ಸಾಧಿಸಿ ಬಿಜೆಪಿಯ ಬಲ ಪ್ರದರ್ಶಿಸುವ ಅನಿವಾರ್ಯತೆ ಇದೆ.
2026 ರ ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ. ಈ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ಸ್ಪರ್ಧೆ ನಿರೀಕ್ಷಿಸಲಾಗಿದೆ(ಏಜೆನ್ಸೀಸ್).