Kerala Congress Second List | ಕಾಂಗ್ರೆಸ್​​ನ ಎರಡನೇ ಪಟ್ಟಿ ಬಿಡುಗಡೆ 
ದೇಶ

ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ.. ಸ್ವತಃ ರಾಜ್ಯ ಅಧ್ಯಕ್ಷರಿಗೆ ಟಿಕೆಟ್ ಮಿಸ್​! | Kerala Congress Second List

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೇವಲ ಮೂರು ವಾರಗಳು ಬಾಕಿ ಇರುವಂತೆ, ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು (Kerala Congress Second List) ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಸ್ವತಃ ರಾಜ್ಯ ಅಧ್ಯಕ್ಷರಿಗೆ ಟಿಕೆಟ್ ನಿರಾಕರಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್​ನ್ನು ತುದಗಾಲಲ್ಲಿ ನಿಲ್ಲಿಸಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಸಂಸದ ಕೆ. ಸುಧಾಕರನ್​ಗೆ ಕೊನೆಗೂ ಟಿಕೆಟ್ ನೀಡಿಲ್ಲ.
ಕಣ್ಣೂರಿನಿಂದಲೇ ಸ್ಪರ್ಧಿಸಬೇಕೆಂದು ಹಠ ಹಿಡಿದಿದ್ದ ಸುಧಾಕರನ್, ಒಂದು ಹಂತದಲ್ಲಿ ಪಕ್ಷ ತೊರೆದು ಸ್ವತಂತ್ರವಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎ.ಕೆ. ಆಂಟನಿ ಸಹಿತ ಹಿರಿಯ ನಾಯಕರ ಮನವೊಲಿಕೆಯ ಬಳಿಕ ಸುಧಾಕರನ್ ಶಾಂತರಾಗಿದ್ದಾರೆ ಎನ್ನಲಾಗಿದ್ದು, ಈಗ ಕಣ್ಣೂರು ಕ್ಷೇತ್ರದಿಂದ ಟಿ.ಒ. ಮೋಹನನ್​ಗೆ ಅದೃಷ್ಟ ಖುಲಾಯಿಸಿದೆ.

ಯಾರಿಗೆ ಲಕ್​..? ಯಾರಿಗೆ ಕೊಕ್..?

ತಿರುವನಂತಪುರಂ ಕೌನ್ಸಿಲರ್ ಕೆ.ಎಸ್. ಶಬರಿನಾಥನ್ ಅವರನ್ನು ನೇಮಮ್‌ನಿಂದ ಕಣಕ್ಕಿಳಿಸಲಾಗಿದೆ. ಇಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐ(ಎಂ) ನ ವಿ.ಎಸ್. ಶಿವನ್‌ಕುಟ್ಟಿ ವಿರುದ್ಧ ಪ್ರಬಲ ಪೈಪೋಟಿ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸಂದೀಪ್ ವಾರಿಯರ್​ಗೆ ಕಾಸರಗೋಡಿನ ತ್ರಿಕರಿಪುರದಿಂದ ಟಿಕೆಟ್ ನೀಡಲಾಗಿದೆ. 
ಪೆರುಂಬವೂರ್‌ನಲ್ಲಿ ಹಾಲಿ ಶಾಸಕ ಎಲ್ದೋಸ್ ಕುನ್ನಪಿಲ್ಲಿಗೆ ಟಿಕೆಟ್ ತಪ್ಪಿಸಿ, ಮನೋಜ್ ಮೂತೇದನ್ ಅವರಿಗೆ ಮಣೆ ಹಾಕಲಾಗಿದೆ. ತ್ರಿಪುನಿತುರದಲ್ಲಿ ಕೆ. ಬಾಬು ಬದಲಿಗೆ ದೀಪಕ್ ಜಾಯ್ ಕಣಕ್ಕಿಳಿಯಲಿದ್ದಾರೆ.
ಕುಟ್ಟನಾಡ್‌ನಿಂದ ಬಂಡಾಯ ಎದ್ದಿದ್ದ ಸಾಜಿ ಜೋಸೆಫ್​ರನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕತ್ವ ಪೂಂಜಾರ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಯುವ ಕಾಂಗ್ರೆಸ್ ನಾಯಕ ಅಬಿನ್ ವರ್ಕಿ ಅರಣ್ಮುಲದಿಂದ ಸ್ಪರ್ಧಿಸಲಿದ್ದಾರೆ. ವೈಪೀನ್ ಕ್ಷೇತ್ರದಲ್ಲಿ ಕೊಚ್ಚಿಯ ಮಾಜಿ ಮೇಯರ್ ಟೋನಿ ಚಮ್ಮನಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಈ ಬಾರಿ 96 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದು, ಇದರಲ್ಲಿ ಎಂಟು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಿರುವುದು ವಿಶೇಷ. ಹಿರಿಯ ನಾಯಕ ವಿ.ಡಿ. ಸತೀಶನ್ ಮಾತನಾಡಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಉಂಟಾಗಿದ್ದ ಎಲ್ಲಾ ಗೊಂದಲಗಳನ್ನು ಪರಿಹರಿಸಲಾಗಿದೆ. ನಮ್ಮ ಏಕೈಕ ಗುರಿ ಎಲ್‌ಡಿಎಫ್ ಸರ್ಕಾರವನ್ನು ಕಿತ್ತೊಗೆಯುವುದು ಎಂದಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಕೇರಳದ 140 ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ದಿನಾಂಕ ನಿಗದಿಪಡಿಸಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಕೇರಳದ ಗದ್ದುಗೆ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಅಂದೇ ತೆರೆ ಬೀಳಲಿದೆ(ಏಜೆನ್ಸೀಸ್​).