ಹೆನ್ರಿ ಮೆಂಡೋನ್ಸಾ (ಎಚ್.ಎಂ. ಪೆರ್ನಾಲ್)
ನವದೆಹಲಿ: ಖ್ಯಾತ ಕೊಂಕಣಿ ಸಾಹಿತಿ ಮತ್ತು ಪತ್ರಕರ್ತ ಹೆನ್ರಿ ಮೆಂಡೋನ್ಸಾ (ಎಚ್.ಎಂ. ಪೆರ್ನಾಲ್) ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( Kendra Sahitya Akademi Award ) ಲಭಿಸಿದೆ. ಇವರ ಸಾಹಿತ್ಯ ವಿಮರ್ಶಾ ಕೃತಿಯಾದ 'ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ' ಈ ಗೌರವಕ್ಕೆ ಪಾತ್ರವಾಗಿದೆ.
ಈ ಪ್ರಶಸ್ತಿ ಪಡೆದ ರಾಜ್ಯದ ನಾಲ್ಕನೇ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್. ಈ ಹಿಂದೆ ಚಾ.ಫ್ರಾ. ದೆಕೊಸ್ತಾ (1992), ಮೆಲ್ವಿನ್ ರೊಡ್ರಿಗಸ್ (2011) ಮತ್ತು ಎಡ್ವಿನ್ ಜೆ.ಎಫ್.ಡಿ. ಸೊಜಾ (2016) ಅವರು ಈ ಗೌರವಕ್ಕೆ ಭಾಜನರಾಗಿದ್ದರು. ಮೂಲತಃ ಉಡುಪಿ ಜಿಲ್ಲೆಯ ಪೆರ್ನಾಲ್ ಗ್ರಾಮದವರಾದ ಇವರು, ಮಂಗಳೂರಿನವರು. ಸುಮಾರು 750ಕ್ಕೂ ಹೆಚ್ಚು ಕವನಗಳು, 100ಕ್ಕೂ ಅಧಿಕ ಸಣ್ಣ ಕಥೆಗಳು ಹಾಗೂ 2,000ಕ್ಕಿಂತ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು
ಪೆರ್ನಾಲ್ ಅವರಿಗೆ ಇದೇ ಕೃತಿಗೆ ಈ ಹಿಂದೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (2021) ಮತ್ತು ಗೋವಾ ಕೊಂಕಣಿ ಅಕಾಡೆಮಿ (2023) ಪ್ರಶಸ್ತಿಗಳು ಸಂದಿವೆ ಎಂಬುದು ಗಮನಾರ್ಹ.
ಬಹುಮಾನ ಏನು ಸಿಗಲಿದೆ?
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1,00,000 (ಒಂದು ಲಕ್ಷ ರೂಪಾಯಿ) ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಮಾರ್ಚ್ 31ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರದಾನ ಮಾಡಲಾಗುವುದು. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ಸಮಿತಿಯು ಈ ಕೃತಿಯನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಬಾರಿ ಎಷ್ಟು ಪ್ರಶಸ್ತಿಗಳು ಸಿಕ್ಕಿವೆ?
ಸಾಹಿತ್ಯ ಅಕಾಡೆಮಿಯು ತನ್ನಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 8 ಕವನ ಸಂಕಲನಗಳು, 4 ಕಾದಂಬರಿಗಳು, 6 ಸಣ್ಣಕಥೆ ಸಂಕಲನಗಳು, 2 ಪ್ರಬಂಧ ಸಂಕಲನಗಳು, 1 ಸಾಹಿತ್ಯ ವಿಮರ್ಶೆ, 1 ಆತ್ಮಕಥೆ ಮತ್ತು 2 ನೆನಪಿನ ಬುತ್ತಿ ಕೃತಿಗಳು 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿವೆ.