Prashant Kishor Video: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಇಡೀ ದೇಶವನ್ನೇ ಅಚ್ಚರಿಗೆ ದೂಡಿದ್ದು, ಯಾವುದೇ ರಾಜಕೀಯ ಅನುಭವವಿಲ್ಲದ ನಟನೊಬ್ಬ ಕಟ್ಟಿದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ದ್ರಾವಿಡ ನೆಲದಲ್ಲಿ ಕಂಪನ ಸೃಷ್ಟಿಸಿದೆ. ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ, ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಒಂದು ವರ್ಷದ ಹಿಂದೆಯೇ ನುಡಿದಿದ್ದ ಭವಿಷ್ಯವಾಣಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಏಪ್ರಿಲ್ 29ರ ಸಮೀಕ್ಷೆಯೊಂದು ಟಿವಿಕೆ 98 ರಿಂದ 120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದಾಗ, ರಾಜಕೀಯ ವಿಶ್ಲೇಷಕರು ಮತ್ತು ಎದುರಾಳಿ ಪಕ್ಷಗಳು ಇದನ್ನು ಅಪಹಾಸ್ಯ ಮಾಡಿದ್ದವು. ಹೊಸ ಪಕ್ಷವೊಂದು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದವು. ಆದರೆ, ಇಂದು ಸೋಮವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಟಿವಿಕೆ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.
ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ಇಲ್ಲಿದೆ..
ಕಳೆದ ವರ್ಷ ಮಾರ್ಚ್‌ನಲ್ಲಿ ತಂತಿ ಟಿವಿಗೆ ಸಂದರ್ಶನ ನೀಡಿದ್ದ ಪ್ರಶಾಂತ್ ಕಿಶೋರ್, ಟಿವಿಕೆ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ವಿಜಯ್ ಒಬ್ಬಂಟಿಯಾಗಿ ಸ್ಪರ್ಧಿಸಿದರೆ ತಮಿಳುನಾಡಿನಲ್ಲಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಹೇಳಿದ್ದರು. ಆಗ ಪತ್ರಕರ್ತರು, ಗೆಲುವು ಎಂದರೆ 118 ಸ್ಥಾನಗಳ ಬಹುಮತವೇ..? ಎಂದು ಕೇಳಿದಾಗ ಕಿಶೋರ್ ಸವಾಲಿನ ರೂಪದಲ್ಲಿ, ಹೌದು, ಖಂಡಿತ. ಈ ವಿಡಿಯೋವನ್ನು ಎತ್ತಿಟ್ಟುಕೊಳ್ಳಿ, ಫಲಿತಾಂಶ ಬಂದಾಗ ಇದನ್ನು ಪ್ಲೇ ಮಾಡಿ ಎಂದು ಹೇಳಿದ್ದರು.
ಪ್ರಶಾಂತ್ ಕಿಶೋರ್ರ ಐ-ಪಿಎಸಿ ಸಂಸ್ಥೆಯು ವಿಜಯ್ ಅವರೊಂದಿಗೆ ಕೆಲಸ ಮಾಡುತ್ತಿದೆ ಎಂಬ ವದಂತಿಗಳ ನಡುವೆ, ಕಿಶೋರ್ ತಮ್ಮ ಸಂಬಂಧವನ್ನು ಸ್ಪಷ್ಟಪಡಿಸಿದ್ದರು. ನಾನು ವಿಜಯ್ಗೆ ರಾಜಕೀಯ ಸಲಹೆಗಾರನಲ್ಲ, ನಾವು ಮೌಲ್ಯಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಐದು ವರ್ಷಗಳ ಹಿಂದೆಯೇ ನಮ್ಮ ನಡುವೆ ಮಾತುಕತೆ ನಡೆದಿತ್ತು ಎಂದು ಹೇಳಿದ್ದರು. ಇಂದು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದ ಬಹುತೇಕ ಎಕ್ಸಿಟ್ ಪೋಲ್‌ಗಳು ಸುಳ್ಳಾಗಿದ್ದು, ಪ್ರಶಾಂತ್ ಕಿಶೋರ್ ಮಾತುಗಳೇ ನಿಜವಾಗುತ್ತಿವೆ. ತಮಿಳುನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಟನೊಬ್ಬ ತನ್ನ ಮೊದಲ ಪ್ರಯತ್ನದಲ್ಲೇ ಅಲುಗಾಡಿಸಿದ್ದಾನೆ(ಏಜೆನ್ಸೀಸ್).