KC Venugopal | ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್
ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಗುರುತಿನ ಚೀಟಿಗಳನ್ನು ಮುದ್ರಿಸಲಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್ (KC Venugopal) ಆಡಳಿತಾರೂಢ ಸಿಪಿಐ(ಎಂ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, ಈ ನಕಲಿ ದಾಖಲೆಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಲು ಸಂಚು ರೂಪಿಸಲಾಗಿದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಶಂಕಿತ ಸ್ಥಳಗಳ ಮೇಲೆ ತಕ್ಷಣ ದಾಳಿ ನಡೆಸಬೇಕು ಮತ್ತು ಮತದಾನದ ದಿನದಂದು ಮತದಾರರ ಗುರುತನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಣ್ಣೂರಿನಂತಹ ಸೂಕ್ಷ್ಮ ಮತಗಟ್ಟೆಗಳಲ್ಲಿ ಬೆದರಿಕೆ ಮತ್ತು ನಕಲಿ ಮತದಾನ ತಡೆಯಲು ಹೆಚ್ಚಿನ ಸಂಖ್ಯೆಯ ಕೇಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕು ಹಾಗೂ ಮತದಾನ ಮತ್ತು ಎಣಿಕೆ ಪ್ರಕ್ರಿಯೆಗಳ ಮೇಲೆ ನಿಗಾ ಇಡಲು ವಿಶೇಷ ವೀಕ್ಷಕರನ್ನು ನೇಮಿಸಬೇಕು ಎಂದು ಯುಡಿಎಫ್ ಆಗ್ರಹಿಸಿದೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಏಪ್ರಿಲ್ 9 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಹಿಳೆಯರಿಗೆ ಕೇರಳ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಲಾಗಿದೆ. ಕಲ್ಯಾಣ ಪಿಂಚಣಿಯನ್ನು ಮಾಸಿಕ 3,000 ರೂಪಾಯಿಗಳಿಗೆ ಹೆಚ್ಚಿಸುವುದು ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 1,000 ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಘೋಷಿಸಲಾಗಿದೆ.
ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಪ್ರಣಾಳಿಕೆಯ ಇತರ ಪ್ರಮುಖ ಅಂಶಗಳನ್ನು ವಿವರಿಸಿದ್ದು, ರಾಜ್ಯದ ಪ್ರತಿ ಕುಟುಂಬಕ್ಕೂ 25 ಲಕ್ಷ ರೂಪಾಯಿಗಳ ವಿಮಾ ಯೋಜನೆ ಮತ್ತು ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡುವ ಭರವಸೆ ನೀಡಿದ್ದಾರೆ.
ಪ್ರಣಾಳಿಕೆಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ವಿಮಾನಯಾನ ಕ್ಷೇತ್ರದ ಸುಧಾರಣೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ ಹಾಗೂ 100 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಎಂಎಸ್‌ಎಂಇ ಘಟಕಗಳಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಲಾಗಿದೆ. ಇದರಲ್ಲಿ ವಿಶೇಷವಾಗಿ ವಯನಾಡಿನಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಉದ್ದೇಶವನ್ನು ಯುಡಿಎಫ್ ವ್ಯಕ್ತಪಡಿಸಿದೆ(ಏಜೆನ್ಸೀಸ್).