1912ರ ಕ್ರಿಕೆಟ್ ಇತಿಹಾಸ ಕೆದಕಿದ ಕೌನ್ ಬನೇಗಾ ಕರೋಡ್‌ಪತಿ 
ದೇಶ

1912ರ ಕ್ರಿಕೆಟ್ ಇತಿಹಾಸ ಕೆದಕಿದ ಕೌನ್ ಬನೇಗಾ ಕರೋಡ್‌ಪತಿ! ದ.ಆಫ್ರಿಕಾ ಕ್ರಿಕೆಟಿಗನ ದಾಖಲೆಯೇ 1 ಕೋಟಿ ರೂ. ಪ್ರಶ್ನೆ | KBC Question

ಪ್ರಮುಖ ಮುಖ್ಯಾಂಶಗಳು

  • ಅಮಿತಾಭ್ ಬಚ್ಚನ್​ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’
  • 1 ಕೋಟಿ ರೂ. ಪ್ರಶ್ನೆಗೆ 1912ರ ಟೆಸ್ಟ್ ಕ್ರಿಕೆಟ್​ ದಾಖಲೆ ಕೆದಕಿದ ಕೆಬಿಸಿ
  • ಆಟಗಾರನ ಹೆಸರು ಇರಲಿ ಅವರು ಮಾಡಿದ ದಾಖಲೆ ತಿಳಿಯುವುದೇ ದೊಡ್ಡ ಸವಾಲು
ಮುಂಬೈ: ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹಿಂದಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯ (KBC Question) ನಿನ್ನೆಯ (ಆ.21) ಸಂಚಿಕೆಯಲ್ಲಿ ಕೇಳಿದ 1 ಕೋಟಿ ರೂ. ಬಹುಮಾನದ ಅತ್ಯಂತ ಕಠಿಣ ಪ್ರಶ್ನೆ ಇದೀಗ ಹಲವರ ಚರ್ಚೆ, ಕುತೂಹಲಕ್ಕೆ ಕಾರಣವಾಗಿದೆ.

ಏನದು ಪ್ರಶ್ನೆ?

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ಒಬ್ಬ ಬೌಲರ್‌ಗೆ ಹ್ಯಾಟ್ರಿಕ್ ವಿಕೆಟ್ ಆಗಿ (ಎರಡೂ ಬಾರಿ ಹ್ಯಾಟ್ರಿಕ್‌ನ ಕೊನೆಯ ವಿಕೆಟ್) ಔಟಾದ ದುರದೃಷ್ಟಕರ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಕುತೂಹಲ ಎಂದರೆ, ಮೊದಲ ಬಾರಿಗೆ 1 ಕೋಟಿ ರೂ. ಪ್ರಶ್ನೆಗೆ ಕ್ರಿಕೆಟ್​ ಕುರಿತಾಗಿ ಕೇಳಿದ್ದು. ಪ್ರಶ್ನೆಯ ಬೆನ್ನಲ್ಲೇ ಅನೇಕರು, ಈ ಅಪರೂಪದ ದಾಖಲೆ ಯಾರ ಹೆಸರಿನಲ್ಲಿ ಇರಬಹುದು ಎಂದು ಕೆಲ ಸಮಯ ತಲೆಕೆಡಿಸಿಕೊಂಡರು.
ಇನ್ನು, ಪ್ರಶ್ನೆ ಕೇಳಿದ ಬಳಿಕ ಆಯ್ಕೆಗಳಾಗಿ ಸಿಡ್ ಎಮೆರಿ, ಟಾಮಿ ವಾರ್ಡ್, ಕ್ಲೌಡ್ ಜೆನ್ನಿಂಗ್ಸ್, ಮತ್ತು ಬಿಲ್ ವಿಟ್ಟಿ ಅವರ ಹೆಸರುಗಳನ್ನು ನೀಡಲಾಯಿತು. ಇಲ್ಲಿ ಟಾಮಿ ವಾರ್ಡ್ (Tommy Ward) ಹೆಸರು ಸರಿಯಾದ ಉತ್ತರ. ಅಷ್ಟಕ್ಕೂ ಏನಿದು ದಾಖಲೆ? ಟಾಮಿ ಅವರು ಯಾರ ಬೌಲಿಂಗ್​ನಲ್ಲಿ ಎರಡೆರೆಡು ಬಾರಿ ಮೂರನೇ ವಿಕೆಟ್​ ಆಗಿ ಔಟ್​ ಆದರು ಎಂಬುದರ ವಿವರ ಹೀಗಿದೆ ನೋಡಿ.

1912ರ ಆ ಪಂದ್ಯದಲ್ಲಿ ಆಗಿದ್ದೇನು?

1912ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಜಿಮ್ಮಿ ಮ್ಯಾಥ್ಯೂಸ್ ಒಂದೇ ಪಂದ್ಯದ ಮೊದಲ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಎರಡು ಪ್ರತ್ಯೇಕ ಹ್ಯಾಟ್ರಿಕ್ ಸಾಧಿಸಿ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು. ಮತ್ತೊಂದೆಡೆ, ಅದೇ ಪಂದ್ಯದಲ್ಲಿ, ವಾರ್ಡ್‌ ಕೂಡ ಅಪರೂಪದ ದಾಖಲೆ ಬರೆದರು. ಮೊದಲ ಇನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಪೂರ್ಣಗೊಳಿಸಿದಾಗ ಔಟಾದ 3ನೇ ಬ್ಯಾಟರ್ ಹಾಗೂ ಎರಡನೇ ಇನಿಂಗ್ಸ್‌ನಲ್ಲೂ ಹ್ಯಾಟ್ರಿಕ್ ಮಾಡಿದಾಗ ಪೆವಿಲಿಯನ್​ ಸೇರಿದ 3ನೇ ಬ್ಯಾಟರ್ ಆದರು. ಅಂದರೆ, ಬೌಲರ್‌ಗೆ ಎರಡು ಹ್ಯಾಟ್ರಿಕ್ ಸಿಗಲು ವಾರ್ಡ್ ಅವರೇ ಅಂತಿಮ ವಿಕೆಟ್ ಆಗಿದ್ದರು ಎಂಬುದು ಮತ್ತೊಂದು ರೆಕಾರ್ಡ್.

ಇಂದಿಗೂ ಜೀವಂತ ಈ ವಿಶ್ವ ದಾಖಲೆ

ಟೆಸ್ಟ್ ಕ್ರಿಕೆಟ್‌ನ 100ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡೂ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಜಿಮ್ಮಿ ಮ್ಯಾಥ್ಯೂಸ್. ಕೆಬಿಸಿ ಕಾರ್ಯಕ್ರಮದಲ್ಲಿ ಕೇಳಲಾಗುವ ಕೋಟಿ ಮೌಲ್ಯದ ಪ್ರಶ್ನೆಗಳಿಗೆ ಕೇವಲ ಸಾಮಾನ್ಯ ಕ್ರಿಕೆಟ್ ಜ್ಞಾನವಿದ್ದರೆ ಸಾಲದು, ಇಂತಹ ಅಪರೂಪದ ಹಾಗೂ ರೋಚಕ ಇತಿಹಾಸಗಳು ಗೊತ್ತಿರಬೇಕು ಎಂಬುದಕ್ಕೆ ಇದೊಂದು ಪ್ರಶ್ನೆಯೇ ಜ್ವಲಂತ ಸಾಕ್ಷಿ ಎನ್ನಬಹುದು,(ಏಜೆನ್ಸೀಸ್).