ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಡತಿ ಕಾವ್ಯ ಮಾರನ್
- ಇದೇ ಮಾರ್ಚ್ 28ರಿಂದ ಐಪಿಎಲ್ 19ನೇ ಆವೃತ್ತಿ
- ಎಸ್ಆರ್ಎಚ್ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
- ಪಾಕ್ ಆಟಗಾರನ ಆಯ್ಕೆ ಅವಶ್ಯಕತೆ ಇತ್ತಾ? ನೆಟ್ಟಿಗರ ಪ್ರಶ್ನೆ
ನವದೆಹಲಿ: ಇದೇ ಮಾರ್ಚ್ 28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗಲಿದ್ದು, ಈ ಟಿ20 ಲೀಗ್ಗಾಗಿ ಕ್ರಿಕೆಟ್ ಪ್ರಿಯರು ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳದಿದ್ದು, ಈ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ನಿಂದ ಕಿತ್ತುಬಿಸಾಡಬೇಕು ಎಂಬ ಕೂಗುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜೋರಾಗಿದೆ.
ಎಸ್ಆರ್ಎಚ್ ಸಹ ಮಾಲೀಕರಾದ ಕಾವ್ಯಾ ಮಾರನ್ ತೆಗೆದುಕೊಂಡ ನಿರ್ಧಾರವೇ ಈ ಮಟ್ಟಿಗಿನ ಟೀಕೆ, ವ್ಯಂಗ್ಯಗಳಿಗೆ ಮುಖ್ಯ ಕಾರಣ. 'ದಿ ಹಂಡ್ರೆಡ್ 2026' ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಕ್ರಿಕೆಟಿಗ ಅಬ್ರಾರ್ ಅಹ್ಮದ್ನನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ. ಆಯ್ಕೆ ಮಾಡಿದ್ದು ಮೊದಲ ತಪ್ಪಾದರೆ, ದುಬಾರಿ ಮೊತ್ತಕ್ಕೆ ಆತನನ್ನು ಖರೀದಿಸಿದ್ದು ಇನ್ನೊಂದು ತಪ್ಪಾಗಿ ಕ್ರಿಕೆಟ್ ಪ್ರಿಯರಿಗೆ ಕಂಡಿತು. ಅಬ್ರಾರ್ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಪಿಕ್ ಮಾಡಲಾಯಿತು.
ಐಪಿಎಲ್ ಫ್ರಾಂಚೈಸಿಗಳು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಎಂಐ ಲಂಡನ್, ಸದರ್ನ್ ಬ್ರೇವ್ ಮತ್ತು ಸನ್‌ರೈಸರ್ಸ್ ಲೀಡ್ಸ್‌ನಲ್ಲಿ ಪಾಲನ್ನು ಹೊಂದಿವೆ. ಹರಾಜಿನಲ್ಲಿ ಹ್ಯಾರಿಸ್ ರೌಫ್ ಮತ್ತು ಶದಾಬ್ ಖಾನ್‌ರಂತಹ ಪ್ರಮುಖ ಪಾಕಿಸ್ತಾನಿ ಆಟಗಾರರಿದ್ದರೂ, ಉಳಿದ ಐಪಿಎಲ್ ತಂಡಗಳು ಪಾಕ್ ಆಟಗಾರರನ್ನು ಖರೀದಿಸಲು ಧೈರ್ಯ ಮಾಡಲಿಲ್ಲ. ಆದರೆ, ಕಾವ್ಯಾ ಮಾರನ್ ಮಾತ್ರ, ಎಲ್ಲಾ ಗೊತ್ತಿದ್ದರೂ ಅಬ್ರಾರ್ ಅಹ್ಮದ್ ಖರೀದಿಗೆ ಮುಂದಾಗಿದ್ದೇ ಸದ್ಯ ಇಷ್ಟೆಲ್ಲ ರಾದ್ಧಾಂತ ಸೃಷ್ಟಿಸಿದೆ.
ಈ ವಿಷಯ ಹೊರಬೀಳುತ್ತಿದ್ದಂತೆ ಕಾವ್ಯಾ ಮಾರನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವಿರುದ್ಧ ಟೀಕೆಗಳ ಸುರಿಮಳೆಯನ್ನು ಶುರುವಾಯಿತು. ಸನ್‌ರೈಸರ್ಸ್ ಸಿಇಒ ಕಾವ್ಯಾ ಮಾರನ್ ಮತ್ತು ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಈ ಹರಾಜಿನಲ್ಲಿ ಭಾಗವಹಿಸಿದ್ದರು. ಸನ್‌ರೈಸರ್ಸ್ ಲೀಡ್ಸ್ ಅನ್ನು ಹ್ಯಾರಿ ಬ್ರೂಕ್ ಮುನ್ನಡೆಸುತ್ತಿದ್ದು, ಹಂಡ್ರೆಡ್ 2026ರ ಲೀಗ್ ಜುಲೈ 21ರಿಂದ ಆಗಸ್ಟ್ 16 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿದೆ.
'ಎಕ್ಸ್' ಖಾತೆ ಅಮಾನತು
ಒಂದೆಡೆ, ಟ್ವಿಟರ್ನಲ್ಲಿ ವ್ಯಾಪಕ ಟೀಕೆಗಳು ಹರಿದುಬಂದ ಬೆನ್ನಲ್ಲೇ ಎಕ್ಸ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ಖಾತೆಯನ್ನು ಎಲಾನ್ ಮಸ್ಕ್ ಒಡೆತನದ ಎಕ್ಸ್ ಅಮಾನತುಗೊಳಿಸಿದೆ. ಇದಕ್ಕೆ ಸ್ಪಷ್ಟ ಕಾರಣವೇನು ಎಂಬುದು ತಿಳಿದಿಲ್ಲ. ಆದರೆ, ಈ ಘಟನೆ ಬೆನ್ನಲ್ಲೇ ಆಗಿರುವುದು ಕೊಂಚ ಲಿಂಕ್ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಲವರು ಎಕ್ಸ್ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕೃತ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).