ಕೇರಳ ಸ್ಟೋರಿ 2; ಬೀಫ್ ತಿನ್ನಿಸುವ ದೃಶ್ಯಕ್ಕೆ ರಿಯಲ್ ಟ್ವಿಸ್ಟ್ ಕೊಟ್ಟ ಕಶ್ಯಪ್: ಯಾರಾದರೂ ಹೀಗೆ ಮಾಡ್ತಾರಾ ಎಂದ ಸ್ಟಾರ್​ ಡೈರೆಕ್ಟರ್  
ದೇಶ

ಕೇರಳ ಸ್ಟೋರಿ 2; ಬೀಫ್ ತಿನ್ನಿಸುವ ದೃಶ್ಯಕ್ಕೆ ರಿಯಲ್ ಟ್ವಿಸ್ಟ್ ಕೊಟ್ಟ ಕಶ್ಯಪ್: ಯಾರಾದರೂ ಹೀಗೆ ಮಾಡ್ತಾರಾ ಎಂದ ಸ್ಟಾರ್​ ಡೈರೆಕ್ಟರ್ | Anurag Kashyap

ಕೊಚ್ಚಿ: ಸದಾ ತನ್ನ ನೇರ ನುಡಿಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್(Anurag Kashyap), ಈಗ ಬಿಡುಗಡೆಗೆ ಸಜ್ಜಾಗಿರುವ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಚಿತ್ರದ ವಿರುದ್ಧ ಸಮರ ಸಾರಿದ್ದಾರೆ.
ಈ ಬಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಶ್ಯಪ್​, ಚಿತ್ರವನ್ನು ಕಸ ಮತ್ತು ಬೂಟಾಟಿಕೆಯ ಪ್ರೊಪಗಾಂಡಾ ಎಂದು ಕರೆಯುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.

ಬೀಫ್ ತಿನ್ನಿಸುವ ದೃಶ್ಯಕ್ಕೆ ವ್ಯಂಗ್ಯ: ಯಾರಾದರೂ ಹೀಗೆ ಮಾಡ್ತಾರಾ?

ಚಿತ್ರದ ಟ್ರೈಲರ್‌ನಲ್ಲಿ ಹಿಂದೂ ಯುವತಿಯೊಬ್ಬಳಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವ ದೃಶ್ಯವಿದ್ದು, ಇದು ಕೇರಳದಾದ್ಯಂತ ಭಾರಿ ವಿರೋಧಕ್ಕೆ ಕಾರಣವಾಗಿದೆ. ಈ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್, ಯಾರಾದರೂ ಈ ರೀತಿ ಬಲವಂತವಾಗಿ ಬೀಫ್ ತಿನ್ನಿಸುತ್ತಾರಾ, ಇಷ್ಟೊಂದು ಅತಿರೇಕವಾಗಿ ಯಾರು ಕಿಚಡಿಯನ್ನೂ ತಿನ್ನಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಚಿತ್ರದಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿ ದ್ವೇಷ ಬಿತ್ತುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ್ದಾರೆ.
ನಿರ್ದೇಶಕ ಒಬ್ಬ ದುರಾಸೆಯ ವ್ಯಕ್ತಿ
ಚಿತ್ರದ ನಿರ್ಮಾಪಕ ವಿಪುಲ್ ಅಮೃತ್ ಲಾಲ್ ಶಾ ಮತ್ತು ತಂಡದ ವಿರುದ್ಧ ಹರಿಹಾಯ್ದ ಕಶ್ಯಪ್, ಇದು ಜನರನ್ನು ವಿಭಜಿಸಿ ಹಣ ಮಾಡುವ ತಂತ್ರವಾಗಿದೆ. ಚಿತ್ರದ ನಿರ್ದೇಶಕ ಒಬ್ಬ ದುರಾಸೆಯ ವ್ಯಕ್ತಿಯಾಗಿದ್ದಾನೆ. ಅವರಿಗೆ ಕೇವಲ ಹಣದ ಮೇಲೆ ಕಣ್ಣಿದೆಯೇ ಹೊರತು ಕಲೆಯ ಮೇಲಲ್ಲ. ಇಂತಹ ಸಿನಿಮಾಗಳು ಸಮಾಜದಲ್ಲಿ ವಿಷ ಉಣಿಸುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

ಈಗಾಗಲೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಿತ್ರವನ್ನು ವಿಷಪೂರಿತ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕೆಂದು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿದೆ. ಫೆಬ್ರವರಿ 27 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ನ್ಯಾಯಾಲಯವು ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ,(ಏಜೆನ್ಸೀಸ್).