Kashmiri Pandits face terror threat again 
ದೇಶ

ಕಾಶ್ಮೀರಿ ಪಂಡಿತರಿಗೆ ಮತ್ತೆ ಉಗ್ರಾತಂಕ

ಕಣಿವೆ ಪ್ರದೇಶ ಜಮ್ಮು-ಕಾಶ್ಮೀರ ಕ್ರಮೇಣವಾಗಿ ಶಾಂತಿಯತ್ತ ಮರಳುತ್ತಿದೆ. ಆದರೆ, ಪಾಕಿಸ್ತಾನ ಮೂಲದ ಕೆಲವು ಸಂಘಟನೆಗಳು ಕಣಿವೆಯಲ್ಲಿ ಮತ್ತೆ ಸಕ್ರಿಯವಾಗಿದ್ದು, ಕಾಶ್ಮೀರಿ ಪಂಡಿತರಿಗೆ ನಿರಂತರವಾಗಿ ಬೆದರಿಕೆ ಒಡ್ಡುತ್ತಿವೆ. ಅದರಲ್ಲೂ, 1990ರಲ್ಲಿ ಸಕ್ರಿಯವಾಗಿದ್ದ ಮತ್ತು ಕಾಶ್ಮೀರಿ ಪಂಡಿತರನ್ನು ಭೀಕರವಾಗಿ ಹಿಂಸಿಸಿದ ‘ಜಾಬಾಜ್ ಫೋರ್ಸ್’ ಕೂಡ ಮತ್ತೆ ತಲೆಎತ್ತಿದ್ದು, ಸಾರ್ವಜನಿಕ ಪ್ರದೇಶಗಳಲ್ಲೇ ಪೋಸ್ಟರ್ ಅಂಟಿಸಿ, ಬೆದರಿಕೆ ಒಡ್ಡಿದೆ.
ಈಗಾಗಲೇ ಕಾಶ್ಮೀರಿ ಪಂಡಿತರು ದೇಶದ ಬೇರೆ ಬೇರೆ ಭಾಗಗಳಲ್ಲಿ ಚದುರಿಕೊಂಡಿದ್ದು, ಕಾಶ್ಮೀರದಲ್ಲಿ ನೆಲೆಸಿರುವವರ ಸಂಖ್ಯೆ ದೊಡ್ಡದೇನಲ್ಲ. ಹೀಗಾಗಿ, ಈಗ ನೆಲೆಸಿರುವ ಪಂಡಿತರು ಸಂಜೆಯಾಗುವುದರೊಳಗೆ ಮನೆ ಸೇರುತ್ತಿದ್ದಾರೆ, ಅಪರಿಚಿತ ಸಂಖ್ಯೆಯಿಂದ ಬಂದ ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ‘ಉಗ್ರರ ವಿರುದ್ಧ ಹೋರಾಡಲು ನಮ್ಮ ಕೈಗೂ ಶಸ್ತ್ರಾಸ್ತ್ರ ಕೊಡಿ’ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿರುವ ಪಂಡಿತರು, ಜೀವಭಯದಲ್ಲೇ ದಿನ ಕಳೆಯುವಂತಾಗಿದೆ.
ಕಾಶ್ಮೀರದ ಪಹಲ್ಗಾಮ್ ಬಳಿಯ ಮಟ್ಟಾನ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರು ತುಂಬ ವರ್ಷಗಳಿಂದ ನೆಲೆಸಿದ್ದಾರೆ. ಈ ಪ್ರದೇಶವೊಂದರಲ್ಲೇ ಇವರ ಸಂಖ್ಯೆ 300ರಷ್ಟಿದೆ. ಆದರೆ, ಮಟ್ಟಾನ್​ನ ಈ ಬಡಾವಣೆಗಳು ಈಗ ಸಂಜೆ ಐದು ಗಂಟೆಯ ನಂತರ ನಿಶ್ಯಬ್ದವಾಗುತ್ತವೆ. ಯಾರೂ ಮನೆಯಿಂದ ಆಚೆ ಬರುವುದಿಲ್ಲ. ‘ಸಂಜೆಯಾಗುವುದರೊಳಗೆ ಮನೆ ಸೇರಿಕೊಳ್ಳಿ, ಅಪರಿಚಿತರಿಂದ ದೂರ ಇರಿ. ಕತ್ತಲೆ ಕವಿದ ಬಳಿಕ ಮನೆಯಿಂದ ಆಚೆ ಬರಬೇಡಿ. ಪ್ರತಿನಿತ್ಯ ಆಫೀಸ್​ಗೆ ಹೋಗಿ, ಬರುವ ದಾರಿಯನ್ನು ಬದಲಿಸುತ್ತಿರಿ.
 ಯಾರಾದರೂ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಕೂಡಲೇ ಮಾಹಿತಿ ನೀಡಿ’ ಎಂದು ಪೊಲೀಸರೇ ಸೂಚನೆ ನೀಡಿದ್ದಾರೆ. ಆದರೆ, ಉಗ್ರರ ಬೆದರಿಕೆಗಳಿಗೆ ಈಗ ಮಣಿಯುವುದಿಲ್ಲ ಎನ್ನುತ್ತಾರೆ ರಮೇಶ್ ಕೌಲ್ (ಹೆಸರು ಬದಲಿಸಲಾಗಿದೆ). 2010ರಲ್ಲಿ ಇವರು ಮತ್ತೆ ಕಾಶ್ಮೀರಕ್ಕೆ ಬಂದು, ಕುಟುಂಬದೊಂದಿಗೆ ನೆಲೆಸಿದ್ದಾರೆ. ಪ್ರಸ್ತುತ ಅವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ.
1990ರ ದಶಕದಲ್ಲಿ ಸಕ್ರಿಯವಾಗಿದ್ದ ಹಲವು ಭಯೋತ್ಪಾದಕ ಸಂಘಟನೆಗಳು ಮತ್ತೆ ಸಕ್ರಿಯವಾಗಿ, ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಒಡ್ಡುತ್ತಿವೆ. ಇವುಗಳ ಪೈಕಿ ಪ್ರಮುಖವಾದದ್ದು ಲಷ್ಕರ್-ಎ-ತೊಯ್ಬಾದ ಛಾಯಾ ಸಂಘಟನೆ ‘ದ ರೆಸಿಟನ್ಸ್ ಫೋರ್ಸ್’ ಮತ್ತು ‘ಮುಸ್ಲಿಂ ಜಾಬಾಜ್ ಫೋರ್ಸ್’. ಈ ಸಂಘಟನೆಗಳು ಇದೇ ಫೆಬ್ರವರಿ 3ರಂದು ಅಂದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಜಮ್ಮು-ಕಾಶ್ಮೀರ ಅಧಿಕೃತ ಭೇಟಿಯ ಎರಡು ದಿನದ ಮೊದಲು ಫಾಲ್ಕನ್ ಸ್ಕಾವ್ ಹೆಸರಿನಲ್ಲಿ ಪೋಸ್ಟರ್ ಅಂಟಿಸಿ, ‘ಕಾಶ್ಮೀರ ಸ್ವತಂತ್ರವಾಗುವರೆಗೂ ಯುದ್ಧ ಮುಂದುವರಿಯಲಿದೆ. ಎಚ್ಚರಿಕೆ ನೀಡಿದರೂ ಮತ್ತೆ ಇಲ್ಲಿ ಬಂದು ನೆಲೆಸಿರುವ ಕಾಶ್ಮೀರಿ ಪಂಡಿತರನ್ನು ಮುಗಿಸುತ್ತೇವೆ’ ಎಂದು ಬೆದರಿಕೆ ಒಡ್ಡಿದೆ. 
ಈ ಬೆಳವಣಿಗೆ ಬೆನ್ನಲ್ಲೇ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿದ್ದು, ಅಲರ್ಟ್ ಆಗಿ ಇರುವಂತೆ ಕಾಶ್ಮೀರಿ ಪಂಡಿತರಿಗೆ ಸೂಚಿಸಿವೆ. 2025ರ ನವೆಂಬರ್​ನಲ್ಲಿ ರಾಜಧಾವನಿ ದೆಹಲಿಯಲ್ಲಿ ನಡೆದ ಭೀಕರ ಬಾಂಬ್​ಸ್ಪೋಟ ಘಟನೆಯ ಬಳಿಕ ‘ದ ರೆಸಿಟನ್ಸ್ ಫೋರ್ಸ್’ ಮತ್ತು ‘ಮುಸ್ಲಿಂ ಜಾಬಾಜ್ ಫೋರ್ಸ್’ ಕಾಶ್ಮೀರದಲ್ಲಿ ಮರು ಸಕ್ರಿಯವಾಗಿವೆ. 

ಪೋಸ್ಟರ್​ನಲ್ಲಿ ಏನಿದೆ?

ಕಾಶ್ಮೀರಿ ಪಂಡಿತರೇ ಕೆಲ ಸೌಲಭ್ಯಗಳ ಆಮಿಷಕ್ಕೆ ಹರಕೆಯ ಕುರಿಯಾಗಬೇಡಿ. ಈ ದಾರಿಯಲ್ಲಿ ನಡೆಯುವ (ಕಾಶ್ಮೀರದಲ್ಲಿ ನೆಲೆಸುವ) ಪರಿಣಾಮ ಪ್ರಾಣವನ್ನೇ ಕಳೆದುಕೊಳ್ಳುವುದು ಎಂಬುದನ್ನು ಹಿಂದೆಯೂ ನೋಡಿದ್ದಿರಿ. ರಾಹುಲ್ ಪಂಡಿತ್, ಮಾಖನ್ ಲಾಲ್, ಮೋಹನ್ ಲಾಲ್ ಮತ್ತು ಇನ್ನಿತರರ ಜತೆ ಏನು ನಡೆಯಿತೋ ಅದೇ ಮತ್ತೆ ನಡೆಯುತ್ತದೆ. ನಿಮ್ಮ ಹೆಸರನ್ನು ಮೃತರ ಪಟ್ಟಿಯಲ್ಲಿ ಸೇರುವಂತೆ ಮಾಡಬೇಡಿ. ಆರೆಸ್ಸೆಸ್​ನ ಸರ್ಕಾರ ಸ್ಥಳೀಯ ಕಾಶ್ಮೀರಿಗಳ ಬಗ್ಗೆ ಅಪನಂಬಿಕೆ ಸೃಷ್ಟಿಸಲು ನಿಮ್ಮನ್ನು ಬಳಸಿಕೊಳ್ಳುತ್ತಿದೆ. 
ಸುಳ್ಳು ಆರೋಪಗಳನ್ನು ಹೊರಿಸಿ ಸ್ಥಳೀಯ ಕಾಶ್ಮೀರಿಗಳನ್ನು ಸರ್ಕಾರಿ ನೌಕರಿಯಿಂದ ವಜಾಗೊಳಿಸಿದೆ. ಅವರ ಆಸ್ತಿಯನ್ನು ಜಪ್ತಿ ಮಾಡಿದೆ. ಇದರಿಂದ ಕಾಶ್ಮೀರಿ ಪಂಡಿತರ ನೌಕರಿಯ ಹಾದಿಯನ್ನು ಸರ್ಕಾರ ಸುಗಮಗೊಳಿಸಿದೆ. ಆದರೆ, ಇದರಿಂದ ಕಾಶ್ಮೀರಿಯೇತರರು ಮತ್ತು ಕಾಶ್ಮೀರಿ ಪಂಡಿತರ ಸಾವಿನ ರಸ್ತೆ ತೆರೆದುಕೊಂಡಿದೆ ಎಂದು ಎಚ್ಚರಿಸುತ್ತಿದ್ದೇವೆ. ನಿಮ್ಮೆಲ್ಲ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ ಆದರೆ ಕಣ್ಣೀರು ಹಾಕಬೇಡಿ.

ಉಗ್ರ ಸಂಘಟನೆಗಳ ಕಾರ್ಯಾಚರಣೆ

ಹಲವು ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದು, ಅವುಗಳ ಪೈಕಿ ಪ್ರಮುಖವಾದವು.

 ಜೈಷ್ ಇ ಮೊಹಮ್ಮದ್
ಲಷ್ಕರ್ ಇ ತೊಯ್ಬಾ
ಇಂಡಿಯನ್ ಮುಜಾಹಿದ್ದಿನ್
ಅಲ್ ಕೈದಾ (ಗಜಾವತ್ ಅಂಸಾರ್-ಭಾರತೀಯ ಶಾಖೆ ಹೆಸರು)
ಹಿಜ್ಬುಲ್ ಮುಜಾಹಿದಿನ್
 ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್
 ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ
ಹರ್ಕತ್ ಉಲ್ ಮುಜಾಹಿದಿನ್
 ಅಲ್ ಬದರ್ 
 ಅಲ್ ಉಮರ್ ಮುಜಾಹಿದಿನ್ 

3 ವರ್ಷಗಳ ಬಳಿಕ...

ಇತ್ತೀಚಿನ ವರ್ಷಗಳ ಪ್ರಕರಣಗಳನ್ನು ಅವಲೋಕಿಸಿದರೆ, 2022ರಲ್ಲಿ ಕಾಶ್ಮೀರ ಪಂಡಿತರ ಹತ್ಯೆಗಳು ನಡೆದಿದ್ದವು. ಆದರೆ, ಆ ಘಟನೆಗಳ ನಂತರ ಸರ್ಕಾರ ಉಗ್ರರ ವಿರುದ್ಧ ಕೈಗೊಂಡ ಕಠಿಣ ಕ್ರಮಗಳಿಂದಾಗಿ, ಹತ್ಯೆ ಮತ್ತು ಬೆದರಿಕೆಯ ಘಟನೆಗಳು ನಿಂತಿದ್ದವು. ಆದರೆ, ಮೂರು ವರ್ಷಗಳ ಬಳಿಕ ಮತ್ತೆ ಪಂಡಿತರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದನ್ನು ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಿವೆ. 

ಪ್ರತ್ಯೇಕತಾವಾದಿಗಳ ಉಪಟಳ

 ಆಲ್ ಪಾರ್ಟಿಸ್ ಹುರಿಯತ್ ಕಾನ್ಪರೆನ್ಸ್ (ಎಪಿಎಚ್​ಸಿ)
ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್​ಎಫ್)
ಲಷ್ಕರ್ ಇ ಜಬ್ಬಾರ್ (ಎಲ್​ಇಜೆ)
 ಲಷ್ಕರ್ ಇ ಉಮರ್ (ಎಲ್​ಇಒ) 
 ತೆಹ್ರಿಕ್ ಉಲ್ ಮುಜಾಹಿದಿನ್ (ಟಿಯುಎಮ್) 
ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿರುವ ‘ದ ರೆಸಿಸ್ಟೆನ್ಸ್ ಫ್ರಂಟ್’ನ ಕಾರ್ಯಾಚರಣೆಗಳನ್ನು ಅನುಷ್ಠಾನಕ್ಕೆ ತರುವ ವಿಭಾಗವೇ ಫಾಲ್ಕನ್ ಸ್ಕಾವ್. ಇದು ಸಣ್ಣ ಗುಂಪುಗಳಲ್ಲಿ ಕಾರ್ಯಾಚರಿಸುತ್ತದೆ ಮತ್ತು ಟಾರ್ಗೆಟ್ ಕಿಲ್ಲಿಂಗ್​ಗಾಗಿಯೇ ರೂಪಿಸಲಾಗಿದೆ. ಮೂಲಗಳ ಪ್ರಕಾರ, 21 ವರ್ಷದೊಳಗಿನ ಸ್ಥಳೀಯ ಯುವಕರನ್ನು ಫಾಲ್ಕನ್ ಸ್ಕಾವ್ಗೆ ನೇಮಿಸಲಾಗಿದೆ. 
ಪೊಲೀಸ್ ಅಥವಾ ಭದ್ರತಾ ಪಡೆಗಳ ಕೈಗೆ ಸುಲಭವಾಗಿ ಸಿಲುಕಿಕೊಳ್ಳಬಾರದು ಎಂಬ ಕಾರಣಕ್ಕಾಗಿ ಯಾವುದೇ ಅಪರಾಧಿಕ ಹಿನ್ನೆಲೆ ಇರದ ಯುವಕರನ್ನು ನೇಮಿಸಲಾಗುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಮತ್ತು ತರಬೇತಿ ಆನ್​ಲೈನ್ ಮೂಲಕವೇ ನಡೆಯುತ್ತದೆ. ಈ ಗುಂಪು ‘ಹಿಟ್ ಆಂಡ್ ರನ್’ (ಕೊಲ್ಲು, ಪರಾರಿಯಾಗು) ನೀತಿಯನ್ನು ಅನುಸರಿಸುತ್ತದೆ. ದಾಳಿ ಎಸಗಿದ ನಂತರ ಈ ಯುವಕರು ಸಾಮಾನ್ಯರಂತೆ ಮುಖ್ಯವಾಹಿನಿಯಲ್ಲೇ ಬದುಕು ಸಾಗಿಸುತ್ತಾರೆ. 
ಹೀಗಾಗಿ, ಇಂಥವರನ್ನು ಪತ್ತೆ ಹಚ್ಚುವುದು ಭದ್ರತಾ ಪಡೆಗಳಿಗೆ ಮತ್ತು ತನಿಖಾ ಏಜೆನ್ಸಿಗಳಿಗೆ ಸವಾಲಾಗಿ ಪರಿಣಮಿಸಿದೆ. ದ ರೆಸಿಸ್ಟೆನ್ಸ್ ಫ್ರಂಟ್ ಮತ್ತು ಫಾಲ್ಕನ್ ಸ್ಕಾವ್ ಸೇರಿದಂತೆ ಅದರ ಎಲ್ಲ ವಿಭಾಗಗಳು ಮತ್ತು ಸಹಸಂಘಟನೆಗಳನ್ನು ಕೇಂದ್ರ ಸರ್ಕಾರ 2023ರ ಜನವರಿಯಲ್ಲಿ ಯುಎಪಿಎ ಅನ್ವಯ ‘ಭಯೋತ್ಪಾದಕ ಸಂಘಟನೆ’ಗಳು ಎಂದು ಘೋಷಿಸಿದೆ. 
ಕಾಶ್ಮೀರಿ ಪಂಡಿತರ ಸಂಖ್ಯೆ ಸೀಮಿತ ಪ್ರಮಾಣದಲ್ಲಿ ಇದ್ದರೂ, ಅವರು ಒಗ್ಗಟ್ಟಾಗಿದ್ದಾರೆ ಮತ್ತು ಧಾರ್ವಿುಕ ಆಚರಣೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಭಯೋತ್ಪಾದಕರ ದಾಳಿಯಿಂದ ಹಾನಿಗೊಳಗಾದ ಮತ್ತು ಪ್ರಕೃತಿ ವಿಕೋಪದಿಂದ ನಷ್ಟವಾದ ದೇವಾಲಯಗಳ ಮರು ನಿರ್ಮಾಣ ಮತ್ತು ಕೆಲ ದೇವಾಲಯಗಳ ಜೀಣೋದ್ಧಾರ ಕಾರ್ಯ ವೇಗವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಹಿಂದೆ ಭಯೋತ್ಪಾದಕರ ಮತ್ತು ಪ್ರತ್ಯೇಕತಾವಾದಿಗಳ ಭೀತಿಯಿಂದ ಜನರು ಮಂದಿರಗಳಿಗೆ ಬರುವುದನ್ನೇ ನಿಲ್ಲಿಸಿದ್ದರು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. 
ಸ್ಥಗಿತಗೊಂಡಿದ್ದ ಧಾರ್ವಿುಕ ಯಾತ್ರೆಗಳನ್ನು ಪುನಃ ಆರಂಭಿಸಿದ್ದಾರೆ. ದೊಡ್ಡ ಹಬ್ಬ ಮತ್ತು ಉತ್ಸವಗಳನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ. ನಿಂತುಹೋಗಿದ್ದ ರಥಯಾತ್ರೆಗಳು ಮರು ಆರಂಭಗೊಂಡಿವೆ. ಹಿಂದೂಗಳು ಮತ್ತೆ ಸಕ್ರಿಯರಾಗುವುದನ್ನು ಭಯೋತ್ಪಾದಕ ಸಂಘಟನೆಗಳು ಸಹಿಸುವುದಿಲ್ಲ. ಹೀಗಾಗಿ ಮತ್ತೆ ಬೆದರಿಕೆ ಒಡ್ಡುತ್ತಿವೆ ಎಂದು ಹೇಳುವ ಸ್ಥಳೀಯ ಪಂಡಿತರು, ಈಗ ಇವರ ಬೆದರಿಕೆಗಳಿಗೆ ಹೆದರುವುದಿಲ್ಲ, ಮಣಿಯುವುದಿಲ್ಲ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ ನೈತಿಕ ಬೆಂಬಲ ಸಿಗುತ್ತಿದೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅಲ್ಲದೆ, ನಾವು ಏನೇ ಮಾಡಿದರೂ ಅವರ (ಭಯೋತ್ಪಾದಕರ ಮತ್ತು ಪ್ರತ್ಯೇಕತಾವಾದಿಗಳ) ಜಿಹಾದಿ ಮಾನಸಿಕತೆ ಕಡಿಮೆ ಆಗುವುದಿಲ್ಲ ಎನ್ನುತ್ತಾರೆ. ಕೇಂದ್ರ ಸರ್ಕಾರ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಹಲವು ಕ್ರಮ ಕೈಗೊಂಡು, ಸೌಲಭ್ಯ ಕಲ್ಪಿಸಿರುವುದು ಕೂಡ ಉಗ್ರ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. 

ಯಾರು ಕಾಶ್ಮೀರಿ ಪಂಡಿತರು?

ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರಿ ಪಂಡಿತರು ಎಂದು ಕರೆಯಲಾಗುತ್ತದೆ. ಈ ಪೈಕಿ ಹೆಚ್ಚಿನವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅಲ್ಲಿಂದ ವಲಸೆಬಂದ ಹಿಂದೂಗಳು ‘ಪನುನ್ ಕಾಶ್ಮೀರ್’ ‘ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ’ ಮುಂತಾದ ಸಂಘಟನೆಗಳನ್ನು ಹುಟ್ಟುಹಾಕಿಕೊಂಡು ಕಾಶ್ಮೀರದ ತಮ್ಮ ಮೂಲನೆಲೆಗಳಲ್ಲಿ ನೆಲೆಸಲು ಸೂಕ್ತ ವ್ಯವಸ್ಥೆ ಹಾಗೂ ವಾತಾವರಣ ನಿರ್ವಿುಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. 1990ರ ಡಿಸೆಂಬರ್ ತಿಂಗಳಲ್ಲಿ ಸ್ಥಾಪನೆಯಾಗಿರುವ ‘ಪನುನ್ ಕಾಶ್ಮೀರ್’ ಸಂಘಟನೆ ಕಾಶ್ಮೀರದ ಹಿಂದೂಗಳಿಗಾಗಿ ಕಣಿವೆಯಲ್ಲಿ ಪ್ರತ್ಯೇಕ ರಾಜ್ಯ ನಿರ್ವಿುಸಬೇಕೆಂದು ಹೋರಾಟ ನಡೆಸುತ್ತಿದೆ.

209 ಪಂಡಿತರ ಭೀಕರ ಹತ್ಯೆ!

ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ 2008ರಲ್ಲಿ ವರದಿಯೊಂದನ್ನು ಜಾರಿ ಮಾಡಿತ್ತು. ಅದರ ಪ್ರಕಾರ 1989ರಿಂದ 2008ರವರೆಗೆ 209 ಕಾಶ್ಮೀರಿ ಪಂಡಿತರ ಭೀಕರ ಹತ್ಯೆ ನಡೆದಿದೆ. ಈ ಸಂಬಂಧ 140 ಪ್ರಕರಣಗಳು ದಾಖಲಾಗಿವೆ. 24 ಪ್ರಕರಣಗಳಲ್ಲಿ ಆರೋಪಪತ್ರ ದಾಖಲಿಸಲಾಗಿದೆ. 
ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ತೊಡಕಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವುದು ತುಂಬ ಸವಾಲಿನ ಕೆಲಸ ಆಗಿತ್ತು. ಕೇಂದ್ರ ಸರ್ಕಾರ 2019ರ ಆಗಸ್ಟ್​ನಲ್ಲಿ ದಿಟ್ಟ ನಿರ್ಧಾರದ ಮೂಲಕ ಇದನ್ನು ಸಾಧ್ಯವಾಗಿಸಿತು. ಆ ಬಳಿಕ ಹೊಮ್ಮಿದ ಆಶಯವೆಂದರೆ ಕಾಶ್ಮೀರದ ಮೂಲನಿವಾಸಿಗಳಾದ ಪಂಡಿತರು ಅಲ್ಲಿ ಮರಳಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ವಾತಾವರಣ ರೂಪುಗೊಳ್ಳಬೇಕು ಎಂಬುದು. ಹಲವು ದಶಕಗಳಿಂದ ಭಯೋತ್ಪಾದನೆಯ ಅಟ್ಟಹಾಸಕ್ಕೆ ನಲುಗಿರುವ ಜಮ್ಮು-ಕಾಶ್ಮೀರ ಹಂತಹಂತವಾಗಿ ಸಹಜ ಸ್ಥಿತಿಗೆ ಬರುತ್ತಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸುತ್ತಿರುವುದು ತಲ್ಲಣ ಮೂಡಿಸಿದೆ. 
2022ರ ಮೇ 12ರಂದು ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರ ಹತ್ಯೆ ನಡೆದಿತ್ತು. ಈ ಘಟನೆ ನಡೆದ ಕೆಲ ದಿನಗಳಲ್ಲೇ ಉಗ್ರರು ಜಮ್ಮುವಿನ ಗೋಪಾಲಪುರದ ಪ್ರೌಢಶಾಲೆಯಲ್ಲಿ ಪಂಡಿತ ಸಮುದಾಯದ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಸಾಂಭಾ ನಿವಾಸಿಯಾಗಿದ್ದ ರಜನಿ ಘಟನೆಯ ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಆಗಮಿಸಿ, ಪತಿ ಹಾಗೂ ಮಗಳೊಂದಿಗೆ ನೆಲೆಸಿದ್ದರು. ಈ ರೀತಿ ದಾಳಿಗಳು ನಡೆಯುತ್ತಿದ್ದರೆ ಪಂಡಿತರಲ್ಲಿ ಸುರಕ್ಷತೆಯ ಭಾವ ಹೇಗೆ ನೆಲೆಸಬಲ್ಲದು?