ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ 
ದೇಶ

ಕರೂರು ಕಾಲ್ತುಳಿತ ದುರಂತ; ನಾಳೆ ಸಿಬಿಐ ಮುಂದೆ ವಿಚಾರಣೆಗೆ ದಳಪತಿ ವಿಜಯ್ ಹಾಜರು ಸಾಧ್ಯತೆ | Thalapathy Vijay

ಚೆನ್ನೈ: 2025 ಸೆಪ್ಟೆಂಬರ್ 27ರಂದು 41 ಮಂದಿಯನ್ನು ಬಲಿಪಡೆದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ನಾಳೆ(ಜ. 12) ದೆಹಲಿಯಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) ಸೆಕ್ಷನ್ 179ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜನವರಿ 6ರಂದು ಸಿಬಿಐ ಸಮನ್ಸ್ ಹೊರಡಿಸಿತ್ತು. ಈ ಹಿನ್ನಲೆ ಸೋಮವಾರ ಬೆಳಗ್ಗೆ 11 ಗಂಟೆಗೆ ದೆಹಲಿಯ ಸಿಬಿಐ ಕಚೇರಿಯಲ್ಲಿ ಹೇಳಿಕೆ ದಾಖಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಪ್ರಕರಣದಲ್ಲೂ ವಿಜಯ್ ಅವರನ್ನು ಸಾಕ್ಷಿಯಾಗಿ ಉಲ್ಲೇಖಿಸಿರುವ ಹಿನ್ನೆಲೆ ಹಿರಿಯ ಕಾನೂನು ಸಲಹಗಾರರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ಬಳಿಕ ವಿಜಯ್ ತನಿಖೆಗೆ ಸಹಕರಿಸಲು ಮುಂದಾಗಿದ್ದಾರೆ. ವಿಚಾರಣೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದರೆ, ನ್ಯಾಯಾಲಯದ ಮುಂದೆ ಸೂಕ್ತ ಪರಿಹಾರಗಳನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆಯಿಂದ ನಡೆಸದೇ ಕೇಂದ್ರ ತನಿಖಾ ಸಂಸ್ಥೆ ಅಥವಾ ನ್ಯಾಯಾಂಗದ ಮೂಲಕ ತನಿಖೆ ನಡೆಸುವಂತೆ ಈ ಹಿಂದೆ ಟಿವಿಕೆ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದ ಮೂಲಕ ತನಿಖೆ ಸಿಬಿಐ ತನಿಖೆ ನಡೆಸುತ್ತಿದ್ದು, ಸಮನ್ಸ್​ಗೆ ಉತ್ತರ ಕೊಡದೇ ಇರುವುದು, ಹಾಜರಾಗುವುದಿರುವುದು ಸರಿಯಲ್ಲ ಎನ್ನುವುದು ಪಕ್ಷದ ನಿಲುವಾಗಿದೆ.
ಹೊಸ ಪಕ್ಷ ಕಟ್ಟಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿ ರಾಜ್ಯ ಪ್ರವಾಸ ಕೈಗೊಂಡಿದ್ದ ದಳಪತಿ, ಕಳೆದ ವರ್ಷದ ಸೆಪ್ಟಂಬರ್​ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ಪ್ರಚಾರದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ 41 ಮಂದಿ ಮೃತಪಟ್ಟು, 110 ಜನ ಗಾಯಗೊಂಡಿದ್ದರು. ಮೊದಲು ಪ್ರಾಥಮಿಕ ಹಂತವಾಗಿ ತನಿಖೆ ನಡೆಸಿದ್ದ ಎಸ್​ಐಟಿ, ಬಳಿಕ ಸುಪ್ರೀಂ ಆದೇಶದ ಬೆನ್ನಲ್ಲೇ ಸಿಬಿಐಗೆ ಕೇಸ್ ಅನ್ನು ವರ್ಗಾಯಿಸಿತ್ತು (ಏಜೆನ್ಸೀಸ್).