ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್
ನವದೆಹಲಿ: 2025 ಸೆಪ್ಟೆಂಬರ್ 27ರಂದು 41 ಮಂದಿಯನ್ನು ಬಲಿಪಡೆದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ಗೆ ಸಿಬಿಐ ಮತ್ತೆ ಜ. 19ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಸಮನ್ಸ್ ಸಂಬಂಧ ದಳಪತಿ ವಿಜಯ್ ಅವರು ಸೋಮವಾರ(ಜ. 12) ಬೆಳಗ್ಗೆ 11 ಗಂಟಗೆ ದೆಹಲಿಯ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ಸುಮಾರು 7 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿದ್ದರು. ಪೊಂಗಲ್ ಸಂಬಂಧ ವಿಚಾರಣೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.
ವಿಚಾರಣೆ ವೇಳೆ ಕಾಲ್ತುಳಿತ ಘಟನೆಗೂ ತಮ್ಮ ಪಕ್ಷ ಟಿವಿಕೆಗೆ ಯಾವುದೇ ಸಂಬಂಧವಿಲ್ಲ. ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಲು ತಾನು ಸ್ಥಳದಿಂದ ಹೊರಟು ಹೋಗಿದ್ದೆ ಎಂದು ವಿಜಯ್ ವಿಚಾರಣೆಯ ಸಮಯದಲ್ಲಿ ಸಿಬಿಐಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಕದ ತನಿಖೆಯ ಭಾಗವಾಗಿ ಈಗಾಗಲೇ ಸಿಬಿಐ ಟಿವಿಕೆ ನಾಯಕರಾದ ಎನ್. ಆನಂದ್, ಆಧವ್ ಅರ್ಜುನ, ಸಿಟಿಆರ್ ನಿರ್ಮಲ್ ಕುಮಾರ್ ಮತ್ತು ಮಥಿಯಝಗನ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಕರೂರ್ ಜಿಲ್ಲಾಧಿಕಾರಿ ಮತ್ತು ಎಸ್ಪಿಯ ಹೇಳಿಕೆಯನ್ನೂ ದಾಖಲಿಸಿದೆ.
ಹೊಸ ಪಕ್ಷ ಕಟ್ಟಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿ ರಾಜ್ಯ ಪ್ರವಾಸ ಕೈಗೊಂಡಿದ್ದ ದಳಪತಿ, ಕಳೆದ ವರ್ಷದ ಸೆಪ್ಟಂಬರ್ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ಪ್ರಚಾರದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ 41 ಮಂದಿ ಮೃತಪಟ್ಟು, 110 ಜನ ಗಾಯಗೊಂಡಿದ್ದರು. ಮೊದಲು ಪ್ರಾಥಮಿಕ ಹಂತವಾಗಿ ತನಿಖೆ ನಡೆಸಿದ್ದ ಎಸ್ಐಟಿ, ಬಳಿಕ ಸುಪ್ರೀಂ ಆದೇಶದ ಬೆನ್ನಲ್ಲೇ ಸಿಬಿಐಗೆ ಕೇಸ್ ಅನ್ನು ವರ್ಗಾಯಿಸಿತ್ತು (ಏಜೆನ್ಸೀಸ್).