ದಳಪತಿ ವಿಜಯ್ 
ದೇಶ

ಕರೂರು ಕಾಲ್ತುಳಿತ; ಇಂದು 2ನೇ ಬಾರಿ ವಿಚಾರಣೆಗೆ ಹಾಜರಾದ ದಳಪತಿ ವಿಜಯ್​; ಜ. 12ರಂದು 7 ಗಂಟೆ ವಿಚಾರಣೆ ನಡೆಸಿದ್ದ ಸಿಬಿಐ | Thalapathy Vijay

ನವದೆಹಲಿ: 2025 ಸೆಪ್ಟೆಂಬರ್ 27ರಂದು 41 ಮಂದಿಯನ್ನು ಬಲಿಪಡೆದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್(Thalapathy Vijay) ಇಂದು(ಜ. 19) ಎರಡನೇ ಬಾರಿಗೆ ಸಿಬಿಐ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಇಂದು ಬೆಳಿಗ್ಗೆ ಲೋಧಿ ರಸ್ತೆಯಲ್ಲಿರುವ ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿ ವಿಜಯ್ ಹಾಜರಾಗಿದ್ದಾರೆ. ಏಜೆನ್ಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಉಪ ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದ ಅಧಿಕಾರಿಗಳ ತಂಡವು ಹಗಲಿನಲ್ಲಿ ಅವರನ್ನು ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. 
ಜನವರಿ 12 ರಂದು ಇಲ್ಲಿನ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರನ್ನು ಸುಮಾರು 7 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು. ಕಳೆದ ಮಂಗಳವಾರ ಮತ್ತೆ ಬರಲು ಹೇಳಿತ್ತು. ಆದರೆ ಪೊಂಗಲ್ ಕಾರಣ ನೀಡಿ ನಟ ಮತ್ತೊಂದು ದಿನಾಂಕವನ್ನು ಕೋರಿದ್ದರು. ಈ ಹಿನ್ನೆಲೆ ಇಂದು ಹಾಜರಾಗಲು ಸಮನ್ಸ್ ನೀಡಿತ್ತು. 
ವಿಚಾರಣೆ ವೇಳೆ ಕಾಲ್ತುಳಿತ ಘಟನೆಗೂ ತಮ್ಮ ಪಕ್ಷ ಟಿವಿಕೆಗೆ ಯಾವುದೇ ಸಂಬಂಧವಿಲ್ಲ. ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಲು ತಾನು ಸ್ಥಳದಿಂದ ಹೊರಟು ಹೋಗಿದ್ದೆ ಎಂದು ವಿಜಯ್ ವಿಚಾರಣೆಯ ಸಮಯದಲ್ಲಿ ಸಿಬಿಐಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿದ್ದವು.
ಹೊಸ ಪಕ್ಷ ಕಟ್ಟಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿ ರಾಜ್ಯ ಪ್ರವಾಸ ಕೈಗೊಂಡಿದ್ದ ದಳಪತಿ, ಕಳೆದ ವರ್ಷದ ಸೆಪ್ಟಂಬರ್​ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ಪ್ರಚಾರದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ 41 ಮಂದಿ ಮೃತಪಟ್ಟು, 110 ಜನ ಗಾಯಗೊಂಡಿದ್ದರು. ಮೊದಲು ಪ್ರಾಥಮಿಕ ಹಂತವಾಗಿ ತನಿಖೆ ನಡೆಸಿದ್ದ ಎಸ್​ಐಟಿ, ಬಳಿಕ ಸುಪ್ರೀಂ ಆದೇಶದ ಬೆನ್ನಲ್ಲೇ ಸಿಬಿಐಗೆ ಕೇಸ್ ಅನ್ನು ವರ್ಗಾಯಿಸಿತ್ತು. ಅದರ ಭಾಗವಾಗಿ ಸಿಬಿಐ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ತಿದೆ (ಏಜೆನ್ಸೀಸ್).