ಸಿಎಂ ವಿಜಯ್ ಮತ್ತು ಎಂ.ಕೆ.ಸ್ಟಾಲಿನ್  
ದೇಶ

ವಿಜಯ್ ಸಿಎಂ ಆದ ಬಳಿಕ ಕರೂರ್ ಕಾಲ್ತುಳಿತ ಪ್ರಕರಣ ಮತ್ತೆ ಮುನ್ನೆಲೆಗೆ: ಘಟನೆ ಸಂಬಂಧ ಡಿಎಂಕೆ ಮತ್ತು ಟಿವಿಕೆ ನಡುವೆ ವಾಗ್ವಾದ | Karur stampede

ಚೆನ್ನೈ: ತಮಿಳುನಾಡಿನಲ್ಲಿ ಸಿ.ಜೋಸೆಫ್ ವಿಜಯ್ ಸಿಎಂ ಆದ ಬಳಿಕ ಕಳೆದ ವರ್ಷ ಸೆ. 27ರಂದು ನಡೆದ ಕರೂರ್ ಕಾಲ್ತುಳಿತ(Karur stampede) ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಹೊಸ ರಾಜಕೀಯ ಸಂಘರ್ಷ ಭುಗಿಲೆದ್ದಿದ್ದು, ಆಡಳಿತಾರೂಢ ಟಿವಿಕೆ ಮತ್ತು ಡಿಎಂಕೆ ನಡುವೆ ತೀವ್ರ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಗುರುವಾರ ಇಬ್ಬರು ಎಐಎಡಿಎಂಕೆ ಮಾಜಿ ಸಚಿವರ ಟಿವಿಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಆಧವ್ ಅರ್ಜುನ್, ಘಟನೆಗೆ ಡಿಎಂಕೆಯೇ ಕಾರಣ ಎಂದು ಆರೋಪಿಸಿದ್ದಾರೆ. ಮತ್ತು ಅಂದಿನ ಆಡಳಿತಾತ್ಮಕ ಲೋಪಗಳು, ಜನಸಂದಣಿಯ ಕಳಪೆ ನಿಯಂತ್ರಣ ಮತ್ತು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ವೈಫಲ್ಯ ಕಾರಣ ಎಂದು ಡಿಎಂಕೆ ವಿರುದ್ಧ ಕಿಡಿಕಾರಿದ್ದರು.
ಮುಂದುವರೆದು ಸಿಎಂ ಆಗಿದ್ದ ಎಂ.ಕೆ.ಸ್ಟಾಲಿನ್​ ಅವರು ಸಹ ಘಟನೆಗೆ ಪರೋಕ್ಷ ಕಾರಣ ಎಂದು ಉಲ್ಲೇಖಿಸಿರುವ ಅವರು, ಹೊಣೆಗಾರರ ​​ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಪಾದಿಸಿದ್ದಾರೆ.

ಡಿಎಂಕೆ ತಿರುಗೇಟು

ಟಿವಿಕೆ ಆರೋಪಕ್ಕೆ ಬಲವಾಗಿ ತಿರುಗೇಟು ನೀಡಿರುವ ವಿಪಕ್ಷ ಡಿಎಂಕೆ, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅಂದು ಕರೂರ್ ಪ್ರಚಾರದಿಂದ ಹಿಂದಿರುಗಿದ ವಿಜಯ್ ವಿರುದ್ಧ ಕ್ರಮ ಕೈಗೊಳ್ಳದಿರುವುದು ನಮ್ಮ ಪ್ರಮುಖ ಲೋಪ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ, ಪ್ರಕರಣದ ವಿರುದ್ಧ ತನಿಖೆ ನಡೆಯುತ್ತಿರುವಾಗಲೇ ಡಿಎಂಕೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸೂಕ್ತವಲ್ಲ. ಸಚಿವ ಆಧವ್ ಅರ್ಜುನ್ ಹೇಳಿಕೆ ವಿರುದ್ಧ ಪ್ರತ್ಯೇಕ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜುಲೈ 10ರಂದು ಕರೂರ್​ಗೆ ಸಿಎಂ ವಿಜಯ್ ಭೇಟಿ

2025 ಸೆ. 27ರಂದು ಕರೂರ್​ನಲ್ಲಿ ನಡೆದ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತ ನಡೆದು 41 ಮಂದಿ ಮೃತಪಟ್ಟಿದ್ದರು. ಹಲವಾರು ಜನರು ಗಾಯಗೊಂಡಿದ್ದರು. ಈಗ ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ಇದೇ ಮೊದಲ ಬಾರಿಗೆ ಸಿಎಂ ವಿಜಯ್ ಜುಲೈ 10ರಂದು ಕರೂರ್​​ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿ ಬಲಿಪಶು ಕುಟುಂಬಗಳನ್ನು ಭೇಟಿಯಾಗುವ ನಿರೀಕ್ಷೆಯಿದೆ (ಏಜೆನ್ಸೀಸ್).