ದೇಶ

ತಿರುಪರಂಕುಂದ್ರಂ ಬೆಟ್ಟದ ಸ್ತಂಭದ ಮೇಲೆ ಕೊನೆಗೂ ಬೆಳಗಿದ ಕಾರ್ತಿಕ ದೀಪ: ಮುಗಿಲು ಮುಟ್ಟಿದ ಭಕ್ತರ ಜಯಘೋಷ! | Karthigai Deepam

ಮಧುರೈ: ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ದೀಪ ಬೆಳಗದೆ ನಾಲ್ಕು ದಿನಗಳ ಕಾಲ ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ಮೇಲಿನ ದೀಪದ ಕಲ್ಲಿನ ಸ್ತಂಭದ ಬಳಿ ಶುಕ್ರವಾರ ಸಂಜೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು.

ಸಂಜೆ 5 ಗಂಟೆಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಬೆಳಿಗ್ಗೆಯಿಂದಲೇ ಬೆಟ್ಟದ ತಪ್ಪಲಿನಲ್ಲಿ ನೂರಾರು ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಬೆಟ್ಟದ ಮೇಲೆ ತೀವ್ರ ಉದ್ವಿಗ್ನತೆ ಮತ್ತು ಕಾನೂನು ಸಂಘರ್ಷ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ಭಾರಿ ಭದ್ರತಾ ವ್ಯವಸ್ಥೆಯ ನಡುವೆ ಈ ವಿಧಿವಿಧಾನವನ್ನು ಪೂರ್ಣಗೊಳಿಸಲಾಯಿತು.

ಭದ್ರತಾ ದೃಷ್ಟಿಯಿಂದ ಬೆಟ್ಟದ ತುದಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇವಲ 50 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಉಳಿದ ಭಕ್ತರು ಬೆಟ್ಟದ ತಪ್ಪಲಿನಲ್ಲಿಯೇ ನಿಂತು ತಮ್ಮ ಕೈಯಲ್ಲಿ ದೀಪಗಳನ್ನು ಹಿಡಿದು ಭಕ್ತಿ ಸಮರ್ಪಿಸಿದರು.

ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಜಾರಿಯಾದ ಆದೇಶ

ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ನಿಗದಿತ ಸ್ಥಳದಲ್ಲಿ ದೀಪ ಬೆಳಗದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ದೀಪ ಬೆಳಗುವ ವೇಳೆಗೆ ಸುಪ್ರೀಂ ಕೋರ್ಟ್ ತನ್ನ ಆದೇಶ ಉಲ್ಲಂಘಿಸಿದ 15 ಮಂದಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ, ದೇವಾಲಯದ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತ್ತು ಮತ್ತು ಇಡೀ ಬೆಟ್ಟದ ಭದ್ರತಾ ಹೊಣೆಯನ್ನು ಸಿಆರ್‌ಪಿಎಫ್‌ಗೆ ವಹಿಸಿತ್ತು. ನ್ಯಾಯಾಲಯದ ಈ ಕಠಿಣ ಕ್ರಮಗಳ ಬೆನ್ನಲ್ಲೇ ದೀಪಸ್ತಂಭದ ಬಳಿ ಕಾರ್ತಿಕ ದೀಪ ಬೆಳಗುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ.