ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ವಕ್ತಾರ ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಹಾಗೂ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಂ. ನಾಗರಾಜು ಅವರು ಸಂಸತ್ತಿನ ಮೇಲ್ಮನೆ ಪ್ರವೇಶಿಸಿದ್ದಾರೆ. ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ ಅಂತಿಮ ದಿನದಂದು ಕಣದಲ್ಲಿ ಈ ನಾಲ್ಕು ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ, ನಾಲ್ವರೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕಮಲ ಕಿಲಕಿಲ
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (BJP) ಅಭ್ಯರ್ಥಿಗಳಾದ ರಜನೀಶ್ ಅಗರ್ವಾಲ್, ತರುಣ್ ಚುಗ್ ಮತ್ತು ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಕಣದಲ್ಲಿ ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಮೂವರೂ ನಾಯಕರು ಗೆಲುವು ಸಾಧಿಸಿದ್ದಾರೆ.
ನಾಮಪತ್ರಗಳ ಪರಿಶೀಲನೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿಗಳ ಹಾದಿ ಸಂಪೂರ್ಣ ಸುಗಮವಾಗಿತ್ತು. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ಬಳಿಕ ಕಣದಲ್ಲಿ ಬೇರೆ ಯಾವುದೇ ಅಭ್ಯರ್ಥಿಗಳು ಉಳಿಯದ ಕಾರಣ, ಮೂವರೂ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಈ ಗೆಲುವಿನೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಾದಂತಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರಗೊಂಡಿರುವ ನಿರ್ಧಾರ ಈಗ ನ್ಯಾಯಾಲಯದ ಅಂಗಳ ತಲುಪಿದೆ. ಚುನಾವಣಾಧಿಕಾರಿಯ ಈ ಕ್ರಮವನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಜೂನ್ 12ರ ಶುಕ್ರವಾರದಂದು ಈ ಅರ್ಜಿಯ ತುರ್ತು ವಿಚಾರಣೆ ನಡೆಯಲಿದೆ. ನೇರ ಚುನಾವಣಾ ಸ್ಪರ್ಧೆಯ ಮೂಲಕ ಮೂರೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲಲು ಅಗತ್ಯವಿರುವ ಸಂಖ್ಯಾಬಲ ಬಿಜೆಪಿಗೆ ಇರಲಿಲ್ಲ. ಆದರೂ ಮೂರನೇ ಸ್ಥಾನವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಬಿಜೆಪಿ ಸರ್ಕಾರವೇ ವ್ಯವಸ್ಥಿತ ಸಂಚು ರೂಪಿಸಿ ಈ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ಮೀನಾಕ್ಷಿ ನಟರಾಜನ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಇದೊಂದು ಅತ್ಯಂತ ತುರ್ತು ಪ್ರಕರಣವಾಗಿದ್ದು, ತಕ್ಷಣವೇ ವಿಚಾರಣೆಗೆ ಪಟ್ಟಿ ಮಾಡಬೇಕು ಅಥವಾ ಕನಿಷ್ಠ ಪಕ್ಷ ಮಧ್ಯಂತರ ಆದೇಶವನ್ನಾದರೂ ನೀಡಬೇಕು ಎಂದು ಮನವಿ ಮಾಡಿದರು. ಈ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ನಾಳೆಗೆ ವಿಚಾರಣೆಗೆ ನಿಗದಿಪಡಿಸಿದೆ.
ಸಿಂಘ್ವಿ ವಾದವೇನು..?
ಬಾಕಿ ಇರುವ ಕ್ರಿಮಿನಲ್ ಪ್ರಕರಣದ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಕಾರಣ ನೀಡಿ ಚುನಾವಣಾಧಿಕಾರಿಯು ಮೀನಾಕ್ಷಿ ಅವರ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ಸಿಂಘ್ವಿ ಕೋರ್ಟ್‌ಗೆ ತಿಳಿಸಿದರು. ಅವರ ವಿರುದ್ಧ ಕೇವಲ ಸಮನ್ಸ್ ಜಾರಿಯಾಗಿತ್ತಷ್ಟೇ, ನ್ಯಾಯಾಲಯ ಆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೂ ಚುನಾವಣಾಧಿಕಾರಿಯು ಅವರನ್ನು ಅನರ್ಹಗೊಳಿಸಿದ್ದಾರೆ ಎಂದು ಸಿಂಘ್ವಿ ತಮ್ಮ ವಾದ ಮಂಡಿಸಿದರು(ಏಜೆನ್ಸೀಸ್).