ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ: ಕುರ್ಚಿ ಕದನಕ್ಕೆ ಇಂದು ತೆರೆ ಬೀಳುತ್ತಾ? ಇಡೀ ರಾಜ್ಯದ ಕಣ್ಣು ಈಗ ರಾಜಧಾನಿತ್ತ! Karnataka Power Tussle
- ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ
- ದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ ಹೈಕಮಾಂಡ್ನಿಂದ ಹೈವೋಲ್ಟೇಜ್ ಮೀಟಿಂಗ್
- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗಿ
- ಕುರ್ಚಿ ಕದನಕ್ಕೆ ಇಂದು ತೆರೆ ಬೀಳುತ್ತಾ? ಇಡೀ ರಾಜ್ಯದ ಕಣ್ಣು ಈಗ ರಾಜಧಾನಿತ್ತ ನೆಟ್ಟಿದೆ
Karnataka Power Tussle : ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಕುರಿತು ಹೆಚ್ಚಿರುವ ಕುತೂಹಲ ಇದೀಗ ತುತ್ತತುದಿಗೆ ತಲುಪಿದ್ದು, ದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೈವೋಲ್ಟೇಜ್ ಸಭೆ ಆರಂಭವಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆಯುತ್ತಿರುವ ಈ ಉನ್ನತ ಮಟ್ಟದ ಸಭೆಯು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸಲಿದೆ. ಮುಖ್ಯಮಂತ್ರಿಗಳ ಅಧಿಕಾರಾವಧಿ ಮತ್ತು ಸಂಪುಟ ಸರ್ಜರಿ ಮಾತ್ರವಲ್ಲದೆ, ಮುಂಬರುವ ರಾಜ್ಯಸಭಾ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯ ಸಾಂಸ್ಥಿಕ ತಂತ್ರಗಾರಿಕೆಯ ಕುರಿತೂ ಈ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ಇಡೀ ರಾಜ್ಯದ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ.
ಸಭೆಗೂ ಮುನ್ನ ಸಿಎಂ-ಡಿಸಿಎಂ ಮುಖಾಮುಖಿ
ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಚರ್ಚೆ ಆರಂಭಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಾದ ಇಂದಿರಾ ಭವನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅಲ್ಲದೆ, ಹೈಕಮಾಂಡ್ ನಾಯಕರೊಂದಿಗಿನ ಪ್ರಮುಖ ಸಭೆಗೂ ಮುನ್ನ ಇಬ್ಬರೂ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿದ್ದಾರೆ. ಈ ಜಂಟಿ ನಡೆ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ತಾತ್ಕಾಲಿಕ ಬ್ರೇಕ್ ಹಾಕುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.
ಅಂದಹಾಗೆ, ಇಂದು ನಡೆಯುತ್ತಿರುವ ಹೈಕಮಾಂಡ್ ನಾಯಕರ ನಿರ್ಣಾಯಕ ಸಭೆಯು, ದೀರ್ಘಕಾಲದ ಸಂದಿಗ್ಧತೆಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ತೀರ್ಮಾನ ಪ್ರಕಟಿಸಬಹುದೆಂಬ ನಿರೀಕ್ಷೆ ಕಾಂಗ್ರೆಸ್ ಪಾಳೆಯದಲ್ಲಿದೆ. ಇನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೇ ಎಐಸಿಸಿ ಮುಂಚೂಣಿ ನಾಯಕರು ಜಂಟಿಯಾಗಿ ಸಭೆ ನಡೆಸಿ, ಕರ್ನಾಟಕದ ಬಿಕ್ಕಟ್ಟು ಶಮನಕ್ಕೆ ಸೂಕ್ತವಾದ ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಈ ಸೂತ್ರದ ಅಡಿಯಲ್ಲೇ ಇಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್ ನಾಯಕರು ಕೇವಲ ಮೇಲ್ನೋಟದ ಪರಿಹಾರಕ್ಕೆ ಕೈಹಾಕದೆ, ಒಟ್ಟಾರೆ ಆಯಾಮಗಳನ್ನು ಆಳವಾಗಿ ವಿಶ್ಲೇಷಿಸಿದ್ದು, ಒಂದು ವೇಳೆ ಈಗಲೇ ನಾಯಕತ್ವ ಬದಲಾವಣೆ ಮಾಡಿದರೆ ಸರ್ಕಾರ ಮತ್ತು ಸಂಘಟನೆ ಮೇಲೆ ಬೀರುವ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳೇನು? ಒಂದು ವೇಳೆ ಯಥಾಸ್ಥಿತಿ ಕಾಯ್ದುಕೊಂಡರೆ ಎದುರಾಗಬಹುದಾದ ಅಡ್ಡಪರಿಣಾಮಗಳೇನು? ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಹಸ್ತಕ್ಷೇಪ ಮಾಡದೆ ಕೇವಲ ಸಚಿವ ಸಂಪುಟ ಪುನಾರಚನೆಗೆ ಮಾತ್ರ ಗ್ರೀನ್ ಸಿಗ್ನಲ್ ನೀಡಿದರೆ ಆಗುವ ಲಾಭ-ನಷ್ಟಗಳ ತೂಕದ ಆಧಾರದ ಮೇಲೆಯೇ ಹೈಕಮಾಂಡ್ ನಾಯಕರು ತೀರ್ಮಾನಿಸಿದರೆ ಏನಾಗಬಹುದು ಎಂಬ ಕುರಿತೂ ವಿಚಾರ ವಿನಿಮಯ ನಡೆದಿದೆ.
ದೆಹಲಿಗೆ ಯಾರೆಲ್ಲಾ ಹೋಗಿದ್ದಾರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ರಾತ್ರಿ 7 ಗಂಟೆಗೆ ತಮ್ಮ ಆಪ್ತ ಸಚಿವರ ದಂಡಿನೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸಿಎಂ ಜತೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಸಾಥ್ ನೀಡಿದ್ದರು. ಮತ್ತೊಂದೆಡೆ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾತ್ರಿ 7.40ರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.