ಭಾರತ-ಪಾಕ್ ಪಂದ್ಯಕ್ಕೆ ಕಾರ್ಗಿಲ್ ನೆನಪುಗಳ ತಳಕು..! ಶೋಯೆಬ್ ಅಖ್ತರ್ ಹೇಳಿದ್ದೇನು..? 
ದೇಶ

ಭಾರತ-ಪಾಕ್ ಪಂದ್ಯಕ್ಕೆ ಕಾರ್ಗಿಲ್ ನೆನಪುಗಳ ತಳಕು..! ಶೋಯೆಬ್ ಅಖ್ತರ್ ಹೇಳಿದ್ದೇನು..? Shoaib Akhtar

ನವದೆಹಲಿ: ನಾಳೆ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ಮೇಲೆ ಇಡೀ ವಿಶ್ವದ ಕಣ್ಣು ಬಿದ್ದಿದೆ. ಆದರೆ, ಈ ಪಂದ್ಯದ ಕಾವು ಕೇವಲ ಮೈದಾನಕ್ಕೆ ಸೀಮಿತವಾಗಿಲ್ಲ. ಪಾಕಿಸ್ತಾನದ ಮಾಜಿ ವೇಗಿ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್(Shoaib Akhtar) ಅವರು ಈ ಪಂದ್ಯದ ಚರ್ಚೆಯ ನಡುವೆ ಕಾರ್ಗಿಲ್ ಯುದ್ಧದ ಪ್ರಸ್ತಾಪ ಮಾಡುವ ಮೂಲಕ ಭಾರೀ ಸಂಚಲನ ಮೂಡಿಸಿದ್ದಾರೆ.

ಪಂದ್ಯದ ನಡುವೆ ಕಾರ್ಗಿಲ್ ನೆನಪು: ಅಖ್ತರ್ ಹೇಳಿದ್ದೇನು..?

ಈ ಸುದ್ದಿಸಂಸ್ಥೆವೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರ ಸಮ್ಮುಖದಲ್ಲೇ ಆಕ್ರೋಶ ಮತ್ತು ಭಾವನೆಗಳ ಸಮ್ಮಿಶ್ರಣದ ಮಾತುಗಳನ್ನಾಡಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಸಮಯವನ್ನು ನೆನಪಿಸಿಕೊಂಡ ಅಖ್ತರ್, ಒಂದೆಡೆ 1999ರ ಕಾರ್ಗಿಲ್ ಯುದ್ಧ ನಡೆಯುತ್ತಿದ್ದರೆ, ಇನ್ನೊಂದೆಡೆ ನಾವು ಮೈದಾನದಲ್ಲಿ ಪಂದ್ಯ ಆಡುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಗಡಿಯಲ್ಲಿ ಉದ್ವಿಗ್ನತೆ ಇರುವಾಗ ಕ್ರೀಡೆಯನ್ನು ಸಾಮಾನ್ಯ ಸ್ಥಿತಿಯಲ್ಲಿ ನೋಡುವುದು ಕಷ್ಟ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಹಸ್ತಲಾಘವ ಮಾಡುವುದು ಮುಖ್ಯ

ಸಂದರ್ಶನದ ಉದ್ದಕ್ಕೂ ಅಖ್ತರ್ ಅವರು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯ ಬಗ್ಗೆ ಮಾತನಾಡಿದ ಅಖ್ತರ್. ನಾನು ಯಾವಾಗಲೂ ಹಸ್ತಲಾಘವ ಮಾಡುವುದಕ್ಕೆ ಒತ್ತು ನೀಡುತ್ತೇನೆ. ವಿಭಜನೆಗಿಂತ ಒಗ್ಗಟ್ಟು ಮುಖ್ಯ ಎಂಬುದು ನನ್ನ ನಂಬಿಕೆ ಎಂದರು. ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ ಕ್ರೀಡೆ ಎರಡು ದೇಶಗಳನ್ನು ಹತ್ತಿರ ತರಬೇಕು ಎಂಬುದು ನನ್ನ ಆಶಯವಾಗಿದೆ ಎಂದಿದ್ದಾರೆ.

ಪಾಕಿಸ್ತಾನದ ನಿಲುವು ಮತ್ತು ವಿಶ್ವಕಪ್ ಭವಿಷ್ಯ

ಆರಂಭದಲ್ಲಿ ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಆಡಲು ನಿರಾಕರಿಸಿದ್ದನ್ನು ಅಖ್ತರ್ ಸಮರ್ಥಿಸಿಕೊಂಡಿದ್ದು, ನನ್ನ ಸರ್ಕಾರ ಒಂದು ನಿಲುವು ತೆಗೆದುಕೊಂಡಾಗ ನಾನು ಅದನ್ನು ಬೆಂಬಲಿಸಲೇಬೇಕು. ಪಾಕಿಸ್ತಾನ ಒಂದು ವೇಳೆ ಈ ವಿಶ್ವಕಪ್ ಆಡದೇ ಇದ್ದಿದ್ದರೆ, ಟೂರ್ನಿಯ ಮೆರುಗೇ ಕುಗ್ಗಿ ಹೋಗುತ್ತಿತ್ತು. ವಿಶ್ವಕಪ್ ವ್ಯರ್ಥವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದ ವಿಷಯವನ್ನೂ ಪ್ರಸ್ತಾಪಿಸಿದ ಅಖ್ತರ್, ಭಾರತ ಮತ್ತು ಪಾಕಿಸ್ತಾನ ತಂಡಗಳು ತಟಸ್ಥ ಸ್ಥಳಗಳಲ್ಲಿ ಆಡಬಹುದಾದರೆ, ಬಾಂಗ್ಲಾದೇಶಕ್ಕೆ ಅನ್ಯಾಯವಾಗುತ್ತಿದೆ ಎಂಬ ಚರ್ಚೆ ಇತ್ತು. ಆದರೆ ಈಗ ಚರ್ಚೆಗಳು ಮುಗಿದು ಕ್ರಿಕೆಟ್ ಆರಂಭವಾಗಿದೆ, ಇದು ಒಳ್ಳೆಯ ಬೆಳವಣಿಗೆ ಎಂದರು.

ಭಾರತ-ಪಾಕ್ ಸಮರ: ಕೊಲೊಂಬೊದಲ್ಲಿ ಹೈ-ಅಲರ್ಟ್!

ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ಕೊಲೊಂಬೊದ ಕ್ರೀಡಾಂಗಣ ಸಜ್ಜಾಗಿದೆ. ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಮಾಜಿ ಆಟಗಾರರ ನಡುವಿನ ಈ ವಾಕ್ಸಮರ ಪಂದ್ಯದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಾರ್ಗಿಲ್ ಯುದ್ಧದಂತಹ ಸೂಕ್ಷ್ಮ ವಿಚಾರಗಳನ್ನು ಅಖ್ತರ್ ಪ್ರಸ್ತಾಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ,(ಏಜೆನ್ಸೀಸ್).