ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪೂಜೆ ಸಲ್ಲಿಸಿರುವುದು.
ಬೆಂಗಳೂರು: ಕಾಂತಾರಾ ಸಿನಿಮಾದ ವಿವಾದಾತ್ಮಕ ಮಿಮಿಕ್ರಿ ಕ್ಷಮೆಯ ಭಾಗವಾಗಿ ಬಾಲಿವುಡ್ ನಟ ರಣವೀರ್ ಸಿಂಗ್(Ranveer Singh) ಮಂಗಳವಾರ(ಮೇ 26) ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷಮೆ ಯಾಚಿಸಿದ್ದಾರೆ. ದೇವಸ್ಥಾನದಲ್ಲಿನ ನಟನ ಫೋಟೋ ಮತ್ತು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಕೆಲವು ತಿಂಗಳ ಹಿಂದೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ರಣವೀರ್ ಸಿಂಗ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಜೊತೆಗಿನ ಸಂವಾದದ ಸಮಯದಲ್ಲಿ ರಣವೀರ್ ಸಿಂಗ್ ಪೂಜ್ಯ ದೈವ ಪಾತ್ರವನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದರು.
ರಣವೀರ್ ಸಿಂಗ್ ಮಿಮಿಕ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಗುರಿಯಾಗಿತ್ತು. ಮರುದಿನ ನಟ ಕ್ಷಮೆಯಾಚಿಸಿದ್ರೂ, ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ್ದ ಹೈಕೋರ್ಟ್ ನಟನ ನಡವಳಿಕೆ ಅನುಚಿತವಾಗಿದೆ ಎಂದು ಆಕ್ಷೇಪಿಸಿತ್ತು. ತರುವಾಯ, ನ್ಯಾಯಾಲಯದ ಮುಂದೆ ರಣವೀರ್ ಕ್ಷಮೆಯಾಚಿಸಿದ್ರು. ಬಳಿಕ ಹೈಕೋರ್ಟ್ ಅವರ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿತು. ಭಾಗವಾಗಿ ಚಾಮುಂಡಿಬೆಟ್ಟಕ್ಕೆ ಭೇಟಿ ಕ್ಷಮೆ ಯಾಚಿಸುವಂತೆ ನಿರ್ದೇಶನ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ (ಏಜೆನ್ಸೀಸ್).