ಕಾನ್ಪುರದ ಎಂಜಿನಿಯರ್ ಚಂದನ್​ ಗುಪ್ತಾ ರಕ್ಷಣೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿರುವ ಪತ್ನಿ ಸ್ನೇಹಾ 
ದೇಶ

ಮಾಸ್ಕೋದಲ್ಲಿ ಕಾನ್ಪುರದ ಎಂಜಿನಿಯರ್ ವಶ; ರಷ್ಯಾ ಮಿಲಿಟರಿಗೆ ಸೇರಲು ಒತ್ತಡ? ಪತ್ನಿಯಿಂದ ಮೋದಿ-ಯೋಗಿಗೆ ಮನವಿ! Kanpur Engineer

ಮಾಸ್ಕೋ: ಮಾಸ್ಕೋದಲ್ಲಿ ಕೆಲಸಕ್ಕಾಗಿ ಹೋಗಿದ್ದ ಭಾರತೀಯ ಯುವಕನೊಬ್ಬನ ಕಥೆ ಈಗ ಭೀಕರ ತಿರುವು ಪಡೆದುಕೊಂಡಿದೆ. ನೋಯ್ಡಾದಲ್ಲಿ ಎಂಜಿನಿಯರ್ (KanpurEngineer) ಆಗಿದ್ದ ಕಾನ್ಪುರದ ಚಂದನ್ ಗುಪ್ತಾ ಎಂಬುವವರನ್ನು ರಷ್ಯಾ ಪೊಲೀಸರು ವಶಕ್ಕೆ ಪಡೆದು, ರಷ್ಯಾದ ಮಿಲಿಟರಿಗೆ ಸೇರುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸದ್ಯ ಮಾಸ್ಕೋದಲ್ಲಿ ಸಿಲುಕಿರುವ ಚಂದನ್ ಪತ್ನಿ ಸ್ನೇಹಾ ಚಂದನ್ ಗುಪ್ತಾ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ಬಳಿ ಸಹಾಯಕ್ಕಾಗಿ ಕಣ್ಣೀರಿನ ಮನವಿ ಮಾಡಿದ್ದಾರೆ.

ನೋಯ್ಡಾ ಕಂಪನಿ ಕೆಲಸಕ್ಕೆಂದು ಹೋದವನಿಗೆ ಕಾದಿತ್ತು ಶಾಕ್!

ಉತ್ತರ ಪ್ರದೇಶದ ಕಾನ್ಪುರ ಮೂಲದ ಚಂದನ್ ಗುಪ್ತಾ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ನೋಯ್ಡಾದ ಸೆಕ್ಟರ್ 62ರಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಂಪನಿಯ ನಿಯೋಜನೆಗಾಗಿ ಚಂದನ್ ರಷ್ಯಾಕ್ಕೆ ತೆರಳಿದ್ದರು.
ಎಲ್ಲವೂ ಸರಿಯಾಗಿಯೇ ಇತ್ತು ಎನ್ನುವಷ್ಟರಲ್ಲಿ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮಾಸ್ಕೋ ಪೊಲೀಸರು ಏಕಾಏಕಿ ಚಂದನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಪೊಲೀಸ್ ವಶಕ್ಕೆ ಪಡೆದು ಜೈಲಿನಲ್ಲಿ ಇಡಲಾಗಿದೆ ಎಂದು ಪತ್ನಿ ಸ್ನೇಹಾ ಅಳಲು ತೋಡಿಕೊಂಡಿದ್ದಾರೆ.
ರಷ್ಯನ್ ಮಿಲಿಟರಿಗೆ ಸೇರಲು ಬಲವಂತ!
ಬಂಧನದ ಬಳಿಕ ಚಂದನ್ ಅವರನ್ನು ರಷ್ಯಾದ ಸೇನೆಗೆ ಸೇರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸ್ನೇಹಾ ಆರೋಪಿಸಿದ್ದಾರೆ. ಉಕ್ರೇನ್ ಯುದ್ಧದ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ರಷ್ಯಾದ ಸೈನ್ಯದಲ್ಲಿ ಸೈನಿಕರ ಕೊರತೆ ತೀವ್ರವಾಗಿದೆ. ಹೀಗಾಗಿ ಭಾರತೀಯರು ಸೇರಿದಂತೆ ಬೇರೆ ಬೇರೆ ದೇಶಗಳಿಂದ ಕೆಲಸಕ್ಕೆ ಬರುವವರನ್ನು ಬಲವಂತವಾಗಿ ತನ್ನ ಸೇನೆಗೆ ಸೇರಿಸಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಮೋದಿ, ಯೋಗಿಗೆ ಕೈಮುಗಿದು ಬೇಡಿದ ಪತ್ನಿ

ವಿದೇಶದ ನೆಲದಲ್ಲಿ ಗಂಡನಿಗೆ ಬಂದಿರುವ ಈ ಕಂಟಕದಿಂದ ಕಂಗೆಟ್ಟಿರುವ ಸ್ನೇಹಾ, ಭಾರತ ಸರ್ಕಾರವೇ ಈಗ ತಮ್ಮ ಏಕೈಕ ಭರವಸೆ ಎಂದು ಹೇಳಿದ್ದಾರೆ. ನನ್ನ ಪತಿಯನ್ನು ಯಾವುದೇ ತಪ್ಪು ಮಾಡದಿದ್ದರೂ ಸಿಲುಕಹಾಕಲಾಗಿದೆ.
ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಸಾಮಾಜಿಕ ಜಾಲತಾಣದ ವಿಡಿಯೋ ಮೂಲಕ ಕೈಮುಗಿದು ಪ್ರಾರ್ಥಿಸಿದ್ದಾರೆ, (ಏಜನ್ಸೀಸ್​).