ಬಾಲಕಿಯರಷ್ಟೇ ಅಲ್ಲ 14ರ ಬಾಲಕನ ಮೇಲೂ ಲೈಂಗಿಕ ದೌರ್ಜನ್ಯ: ಕಳಚಿಬಿತ್ತು 25ರ ಯುವತಿಯ ಕರಾಳ ಮುಖ! Kannur Woman
- ಕಾಸರಗೋಡಿನಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ
- ಕಣ್ಣೂರು ಮೂಲದ 25 ವರ್ಷದ ಸ್ನೇಹಾ ಮೆರ್ಲಿನ್ ಎಂಬಾಕೆಯ ಬಂಧನ
- ಲೈಂಗಿಕ ವಿಕೃತ ಮನಸ್ಥಿತಿಯ ಸ್ನೇಹಾಗೆ ಅಪ್ರಾಪ್ತರೇ ಟಾರ್ಗೆಟ್
- 14 ವರ್ಷದ ಬಾಲಕನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ
Kannur Woman : ಕಾಸರಗೋಡಿನಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿರುವ 25 ವರ್ಷದ ಸ್ನೇಹಾ ಮೆರ್ಲಿನ್ ಎಂಬಾಕೆ ಲೈಂಗಿಕ ವಿಕೃತ ಮನಸ್ಥಿತಿಯನ್ನು ಹೊಂದಿದ್ದು, ಆಕೆಯ ವಿಕೃತಿಗಳಿಗೆ ಸಂತ್ರಸ್ತರಾದವರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ 14 ವರ್ಷ ಹಾಗೂ 12 ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಗಳಲ್ಲೂ ಈ ಯುವತಿಯನ್ನು ಬಂಧಿಸಲಾಗಿತ್ತು. ಇದರ ಜೊತೆಗೆ, ಸಿಪಿಐ (CPI) ಪಕ್ಷದ ನಾಯಕರೊಬ್ಬರ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲೂ ಸ್ನೇಹಾ ಪ್ರಮುಖ ಆರೋಪಿಯಾಗಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಆರೋಪಿ ಸ್ನೇಹಾ ಮೆರ್ಲಿನ್ ಮೇಲಿರುವ ಇತ್ತೀಚಿನ ಆರೋಪವೇನೆಂದರೆ, ಮೆಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ಮಲಗಿದ್ದ 16 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರು ದಾಖಲಾಗಿದೆ. ಬಾಲಕಿಯ ತಾಯಿಯ ಸ್ನೇಹಿತೆಯಾಗಿದ್ದ ಆರೋಪಿ ಸ್ನೇಹಾ, ಘಟನೆ ನಡೆದ ದಿನದಂದು ಅವರ ಮನೆಗೆ ಹೋಗಿ ಈ ಕೃತ್ಯ ಎಸಗಿದ್ದಾಳೆ, ಆದರೆ ಬಾಲಕಿಯು ಭಯದಿಂದಾಗಿ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಇತ್ತೀಚೆಗೆ ನಡೆದ ಕೌನ್ಸೆಲಿಂಗ್ ಅವಧಿಯಲ್ಲಿ ಬಾಲಕಿ ಈ ಆಘಾತಕಾರಿ ವಿಷಯವನ್ನು ಬಾಯಿಬಿಟ್ಟಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಯುವತಿಯ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಸ್ನೇಹಾ ಮೆರ್ಲಿನ್ ವ್ಯವಸ್ಥಿತವಾಗಿ ಅಪ್ರಾಪ್ತೆಯರನ್ನು ಗುರಿಯಾಗಿಸಿಕೊಂಡು ತನ್ನ ಲೈಂಗಿಕ ವಿಕೃತಿಗಳಿಗೆ ಬಳಸಿಕೊಳ್ಳುತ್ತಿದ್ದಳು. ಆರಂಭದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದ ಈಕೆ, ಆ ಬಳಿಕ ಅವರ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಳು ಎಂದು ಹೇಳಲಾಗಿದೆ. ಮರ್ಯಾದೆ ಮತ್ತು ಭಯದಿಂದಾಗಿ ಹೊರಗೆ ಹೇಳಿಕೊಳ್ಳದ ಮಕ್ಕಳ ಅಸಹಾಯಕತೆಯನ್ನು ಈಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ಈ ಹಿಂದೆ ಜುಲೈ 2025 ರಲ್ಲಿ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ಈಕೆಯನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ. ಶಾಲೆಯಲ್ಲಿ ನಡೆದ ತಪಾಸಣೆ ವೇಳೆ ಬಾಲಕಿಯ ಬ್ಯಾಗ್‌ನಲ್ಲಿ ಶಿಕ್ಷಕರಿಗೆ ಮೊಬೈಲ್ ಫೋನ್‌ವೊಂದು ಪತ್ತೆಯಾಗಿದ್ದು, ಅದನ್ನು ಪರಿಶೀಲಿಸಿದಾಗ ಸಂಶಯಾಸ್ಪದ ಹಾಗೂ ಆಕ್ಷೇಪಾರ್ಹ ದೃಶ್ಯಾವಳಿಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ತಕ್ಷಣವೇ ಚೈಲ್ಡ್ ಲೈನ್ ಕಾರ್ಯಕರ್ತರು ಬಾಲಕಿಗೆ ನಡೆಸಿದ ಕೌನ್ಸೆಲಿಂಗ್ ಅವಧಿಯಲ್ಲಿ ಈ ಘೋರ ದೌರ್ಜನ್ಯದ ಅಸಲಿ ಸತ್ಯ ಹೊರಬಂದಿದ್ದು, ಆರೋಪಿ ಸ್ನೇಹಾ ಮೆರ್ಲಿನ್ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಆ 12 ವರ್ಷದ ಬಾಲಕಿ ಚೈಲ್ಡ್ ಲೈನ್ ಕಾರ್ಯಕರ್ತರ ಮುಂದೆ ಕಣ್ಣೀರಿಡುತ್ತಾ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿದಳು.
ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದಾಗ, ಆರೋಪಿ ಸ್ನೇಹಾ ಮೆರ್ಲಿನ್, ಬಾಲಕಿಗೆ ಚಿನ್ನದ ಬ್ರೇಸ್‌ಲೆಟ್ ಸೇರಿದಂತೆ ಹಲವು ಉಡುಗೊರೆಗಳನ್ನು ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಈಕೆಯ ವಿರುದ್ಧ ಮತ್ತೊಂದು ಆಘಾತಕಾರಿ ಪೋಕ್ಸೋ (POCSO) ಪ್ರಕರಣ ದಾಖಲಾಗಿದ್ದು, ಈಕೆ 14 ವರ್ಷದ ಅಪ್ರಾಪ್ತ ಬಾಲಕನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೆ, ಆ ದೃಶ್ಯಾವಳಿಗಳನ್ನು ತೋರಿಸಿ ಬಾಲಕನಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ವಿಷಯವೂ ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ, (ಏಜೆನ್ಸಿಸ್).