Kangana Ranaut | ಮೋದಿ ನಿಂದಿಸಿದ ಅಪ್ರಾಪ್ತೆಯ ಹಿಂದೆ 'ಆ ಎರಡು ಗುಂಪುಗಳಿವೆ' ಎಂದ ಬಿಜೆಪಿ ಸಂಸದೆ  
ದೇಶ

15 ವರ್ಷದ ಹುಡುಗಿ ಮಾಡಿದ್ಲಾ...? ಮಾಡಿಸಿದ್ರಾ..? ಮೋದಿ ನಿಂದಿಸಿದ ಅಪ್ರಾಪ್ತೆಯ ಹಿಂದೆ 'ಆ ಎರಡು ಗುಂಪುಗಳಿವೆ' ಎಂದ ಬಿಜೆಪಿ ಸಂಸದೆ | Kangana Ranaut

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ವಿವಾದಕ್ಕೆ ಈಡಾಗಿದ್ದ ರುಚಿಕಾ ಸಿಂಗ್ ಎಂಬ ಹದಿನೈದು ವರ್ಷದ ಬಾಲಕಿ ಬಹಿರಂಗವಾಗಿ ಕ್ಷಮಾಪಣೆ ಕೇಳುವ ವಿಡಿಯೀ ಹಂಚಿಕೊಂಡ ಬೆನ್ನಲ್ಲೇ, ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರುಚಿಕಾ ಸಿಂಗ್ ಕ್ಷಮಾಪಣೆ ವಿಡಿಯೋ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಕಂಗನಾ, ಯುವತಿಯರ ಮೇಲೆ ಕೆಲವು ಕಮ್ಯೂನಿಸ್ಟ್ ಹಾಗೂ ಫೆಮಿನಿಸ್ಟ್ ಗುಂಪುಗಳ ಪ್ರಭಾವದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಗೆ ಕೇವಲ 15 ವರ್ಷ ವಯಸ್ಸಾಗಿದ್ದು, ಇಡೀ ಜೀವನದಲ್ಲಿ ಎಂದಿಗೂ ಮೋದಿಜಿ ವಿರುದ್ಧ ಪೋಸ್ಟ್ ಮಾಡಿರಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಆ ದಿನ ಆಕೆಯ ಸ್ನೇಹಿತರು ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಚೋದನೆ ನೀಡಿ ಇಂತಹ ಮಾತುಗಳನ್ನು ಆಡಿಸಿದ್ದಾರೆ ಎಂದರು.
ಹೆತ್ತವರು ತಮ್ಮ ಮಕ್ಕಳನ್ನು ಇಂತಹ ಡೆಮೊನಿಕ್ ಲೆಫ್ಟಿಸ್ಟ್ ಮತ್ತು ಫೆಮಿನಾಜಿಗಳಿಂದ ರಕ್ಷಿಸಬೇಕು ಎಂದು ಬರೆದುಕೊಂಡಿರುವ ಬಿಜೆಪಿ ಸಂಸದೆ, ಇತರ ಧರ್ಮದ ಹೆಣ್ಣುಮಕ್ಕಳು ಇಂತಹ ಅಸಭ್ಯ ಪ್ರದರ್ಶನಗಳನ್ನು ಮಾಡುವುದಿಲ್ಲ, ಆದರೆ ನಮ್ಮ ಹೆಣ್ಣುಮಕ್ಕಳು ಬಹಳ ಸುಲಭವಾಗಿ ದುರ್ಬಳಕೆಯಾಗುತ್ತಿದ್ದಾರೆ. ಒಂದು ಸಮುದಾಯವಾಗಿ ನಾವು ಎಲ್ಲೋ ಸೋಲುತ್ತಿದ್ದೇವೆ, ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡು ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಈ ಘಟನೆ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನಾತ್ಮಕ ಮಾತುಗಳು ನೋವುಂಟುಮಾಡಿವೆ. ಆದಾಗ್ಯೂ ಯುವಜನರು ತಮ್ಮ ತಪ್ಪುಗಳಿಂದ ಕಲಿಯಲು ಅವಕಾಶ ನೀಡಬೇಕು. ಶಿಕ್ಷಿಸುವ ಬದಲು ಸಮಾಜ ಅವರಿಗೆ ಸರಿಯಾದ ಹಾದಿ ತೋರಿಸಬೇಕು ಎಂದು ಹೇಳಿ ಆ ವಿದ್ಯಾರ್ಥಿಗಳನ್ನು ಕ್ಷಮಿಸಿರುವುದಾಗಿ ತಿಳಿಸಿದ್ದರು.

ರುಚಿಕಾ ಸಿಂಗ್​ ಹೇಳಿದ್ದೇನು...?

ಮತ್ತೊಂದೆಡೆ, ವೈರಲ್ ವೀಡಿಯೋದಲ್ಲಿ ಕ್ಷಮೆ ಕೇಳಿರುವ ರುಚಿಕಾ ಸಿಂಗ್, ತಮಗೆ ಕೇವಲ 15 ವರ್ಷ ವಯಸ್ಸಾಗಿದ್ದು ಇತರರ ಪ್ರಚೋದನೆಗೆ ಒಳಗಾಗಿ ಈ ತಪ್ಪು ಮಾಡಿದ್ದಾಗಿ ಹೇಳಿದ್ದಾರೆ. ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್‌ಗೆ ಹೋಗಿದ್ದಾಗ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿದ್ದ ಜನರು ಪ್ರಧಾನಿ ವಿರುದ್ಧ ನಿಂದನಾತ್ಮಕ ಘೋಷಣೆ ಕೂಗುವುದನ್ನು ನೊಡಿ, ಅದರಿಂದ ಪ್ರಭಾವಿತಳಾಗಿದ್ದೆ ಎಂದು ತಿಳಿಸಿದ್ದಾರೆ. ತಾವು ಮಾಡಿದ್ದು ಕ್ಷಮಿಸಲಾರದ ತಪ್ಪು, ಇದು ತಮ್ಮ ಮೊದಲ ಮತ್ತು ಕೊನೆಯ ತಪ್ಪಾಗಿದ್ದು ಇಡೀ ದೇಶದ ಬಳಿ ಕ್ಷಮೆ ಕೇಳುವುದಾಗಿ ಕಣ್ಣೀರಿಟ್ಟಿದ್ದಾರೆ. ಪ್ರಸ್ತುತ ದೆಹಲಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ(ಏಜೆನ್ಸೀಸ್​).