Kangana Ranaut | ಬಿಜೆಪಿ ಸಂಸದೆ ಕಂಗನಾ ರಣಾವತ್
ದೆಹಲಿ: ಸಂಸತ್ತಿನಲ್ಲಿ ಶುಕ್ರವಾರ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಕುರಿತು ನಡೆದ ಚರ್ಚೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ಮಸೂದೆಗಳನ್ನು ಕಟುವಾಗಿ ಟೀಕಿಸಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಕಂಗನಾ ರಣಾವತ್, ರಾಹುಲ್ ಮಾತುಗಳನ್ನು ಕೇಳುವುದು ತಲೆನೋವಿನ ಕೆಲಸ ಎಂದು ಲೇವಡಿ ಮಾಡಿದರು. ರಾಹುಲ್ ಬಾಲ್ಯದ ಆಘಾತಗಳನ್ನು ಅನುಭವಿಸುತ್ತಿರುವಂತೆ ತೋರುತ್ತಿದೆ ಮತ್ತು ಅವರ ನಡವಳಿಕೆಯು ಸಂಸತ್ತಿಗೆ ಮಾಡಿದ ಅಣಕವಾಗಿದೆ ಎಂದು ಟೀಕಿಸಿದರು. ಸದನದಲ್ಲಿ ರಾಹುಲ್ ಮಾತುಗಳು ಉಪದ್ರವದಂತಿತ್ತು, ಆದ್ದರಿಂದ ಸ್ವತಃ ಸ್ಪೀಕರ್ ಅವರೇ ವಿಪಕ್ಷ ನಾಯಕರನ್ನು ತಡೆಯಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಆರೋಪಗಳೇನು..?
ಸಂಸತ್ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಸ್ತುತ ಮಂಡಿಸಲಾಗಿರುವ ಮಸೂದೆಗಳಿಗೂ ಮಹಿಳಾ ಸಬಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಸಿದರು. ಇದು ಕೇವಲ ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನ ಮತ್ತು ನಾಚಿಕೆಗೇಡಿನ ಕೃತ್ಯ ಎಂದು ಕರೆದರು. 2029 ರ ಲೋಕಸಭಾ ಚುನಾವಣೆಯಿಂದ ಮೀಸಲಾತಿ ಜಾರಿಗೆ ತರುವ ಸರ್ಕಾರದ ನಿರ್ಧಾರವು ಒಬಿಸಿ ಸಮುದಾಯಕ್ಕೆ ಅಧಿಕಾರ ಮತ್ತು ಪ್ರಾತಿನಿಧ್ಯವನ್ನು ನಿರಾಕರಿಸುವ ತಂತ್ರವಾಗಿದೆ ಎನ್ನುವುದು ರಾಹುಲ್ ಆರೋಪ.
ಜಾತಿ ಜನಗಣತಿಯನ್ನು ಬೈಪಾಸ್ ಮಾಡಲು ಸರ್ಕಾರ ಈ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ವಿಪಕ್ಷ ನಾಯಕರು, ವಿಳಂಬ ಮಾಡದೆ ಹಳೆಯ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಸವಾಲು ಹಾಕಿದರು. ಕೇಂದ್ರ ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಇಡೀ ದೇಶದ ರಾಜಕೀಯ ನಕ್ಷೆಯನ್ನು ಮರುವಿನ್ಯಾಸಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ದೂರಿದರು.
ಜಾತಿ ಜನಗಣತಿ ಮತ್ತು ಪ್ರಾತಿನಿಧ್ಯದ ವಿವಾದ
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಜಾತಿ ಜನಗಣತಿಯ ಅಗತ್ಯವನ್ನು ಒತ್ತಿ ಹೇಳಿದರು. ಮೀಸಲಾತಿ ಮತ್ತು ಪ್ರಾತಿನಿಧ್ಯದ ನಡುವೆ ಇರುವ ಸಂಬಂಧವನ್ನು ಸರ್ಕಾರ ಕಡಿದುಹಾಕಲು ಪ್ರಯತ್ನಿಸುತ್ತಿದ್ದು, ಇದರಿಂದ ಮುಂದಿನ 10 ವರ್ಷಗಳ ಕಾಲ ಪ್ರಮುಖ ನಿರ್ಧಾರಗಳನ್ನು ವಿಳಂಬ ಮಾಡಬಹುದು ಎಂಬುದು ರಾಹುಲ್ ವಾದವಾಗಿತ್ತು.
ಏನಿದು ಡಿಲಿಮಿಟೇಶನ್..?
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ ತೀರ್ಮಾನವನ್ನು 2029ರ ಸಾರ್ವತ್ರಿಕ ಚುನಾವಣೆಯಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯ ಅತ್ಯಂತ ನಿರ್ಣಾಯಕ ಭಾಗವಾಗಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಕುರಿತು ಈಗ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಭಾರತದ ಸಂವಿಧಾನದ 82ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ಬಳಿಕ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರಚಿಸುವುದು ಕಡ್ಡಾಯವಾಗಿದೆ. 1952 ರಿಂದ ದಶಕಕ್ಕೊಮ್ಮೆ ಮೂರು ಬಾರಿ ಈ ಪ್ರಕ್ರಿಯೆ ನಡೆದಿದ್ದರೂ, 1976 ರಲ್ಲಿ ತರಲಾದ 42ನೇ ಸಾಂವಿಧಾನಿಕ ತಿದ್ದುಪಡಿಯು ಈ ಪರಿಷ್ಕರಣೆಯನ್ನು 2001ರವರೆಗೆ ಸ್ಥಗಿತಗೊಳಿಸಿತ್ತು. ಇದಾದ ಬಳಿಕ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ಕ್ಕೆ ಸೀಮಿತಗೊಳಿಸಿ, ಅದನ್ನು ಮತ್ತಷ್ಟು ಕಾಲ ಮುಂದುವರಿಸಲಾಗಿತ್ತು. ಈಗ ದಶಕಗಳ ನಂತರ ಮತ್ತೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ(ಏಜೆನ್ಸೀಸ್).