ಕಂಗನಾ ರಣಾವತ್ ಮತ್ತು ಜ್ಯೋತಿಮಣಿ 
ದೇಶ

ಕಂಗನಾಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ; ರಾಹುಲ್ ಗಾಂಧಿಯನ್ನು ಟಪೋರಿ ಎಂದ ಕಂಗನಾ ವಿರುದ್ಧ ಜ್ಯೋತಿಮಣಿ ಕಿಡಿ | Jothimani

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದಿರುವ ಬಿಜೆಪಿ ಸಂಸದೆ ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ(Jothimani) ಕಿಡಿಕಾರಿದ್ದು, ಕಂಗನಾಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದೆ ಜ್ಯೋತಿಮಣಿ, ಕಂಗನಾ ರನೌತ್ ಅವರಿಗೆ ಸ್ವಲ್ಪ ತುರ್ತು ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಏನೋ ಭಯಾನಕ ಸಮಸ್ಯೆ ಇದೆ. ಬಹುಶಃ ಅವರ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣದ ಕಾರಣ, ಅವರು ಯಾವುದೋ ರೀತಿಯ ಖಿನ್ನತೆಯಲ್ಲಿರಬಹುದು. ಅದಕ್ಕಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಂಗನಾಗೆ ರಾಜಕೀಯ ಅಥವಾ ಸಾರ್ವಜನಿಕರ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಮಾಧ್ಯಮಗಳು ಅವರ ಕಮೆಂಟ್​ಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅವರನ್ನು ನಿರ್ಣಯಿಸಲು ಕಂಗನಾ ರಣಾವತ್ ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಗನಾ ರಣಾವತ್ ಹೇಳಿದ್ದೇನು? 

ಇತ್ತೀಚಿಗೆ ಮಧ್ಯಪ್ರಾಚ್ಯದ ಸಂಘರ್ಷ ಮತ್ತು ದೇಶದಲ್ಲಿ ಎಲ್​ಪಿಜಿ ಅಭಾವದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಮಯದಲ್ಲಿ ಸಂಸತ್​ನ ಮೆಟ್ಟಿಳುಗಳ ಮೇಲೆ ಕುಳಿತು ಚಹಾ ಮತ್ತು ಬಿಸ್ಕತ್ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಡೆ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಕುರಿತು ಬುಧವಾರ ಸಂಸತ್​ ಬಳಿ ಮಾತನಾಡಿದ್ದ ಕಂಗನಾ ರಣಾವತ್, ರಾಹುಲ್ ಗಾಂಧಿಯವರ ವರ್ತನೆ ಮಹಿಳೆರಿಗೆ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಅವರು ಮಹಿಳೆಯರ ಜೊತೆ ಹೊರಟಾಗಿ ನಡೆದುಕೊಳ್ತಾರೆ. ಆದರೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ನಡವಳಿಕೆ ಉತ್ತಮವಾಗಿದೆ. ಅವರನ್ನು ನೋಡಿಯಾದರು ಕಲಿಯಬೇಕು ಎಂದಿದ್ದರು (ಏಜೆನ್ಸೀಸ್).