ಠಾಕ್ರೆ-ಪವಾರ್ ಕೋಟೆಯಲ್ಲಿ ಕಮಲ ಕಲರವ
ರವೀಂದ್ರ ಎಸ್. ದೇಶಮುಖ್
ಈ ಬಾರಿಯ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಎಷ್ಟು ಜಿದ್ದಾಜಿದ್ದಿಯಿಂದ ಕೂಡಿತ್ತು ಎಂದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನೂ ಪ್ರತ್ಯೇಕವಾಗಿ ಎದುರಿಸಿದ್ದ ಠಾಕ್ರೆ ಸೋದರರು ಒಂದಾದರು! ಲೋಕಸಭೆ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಿದ್ದ ಪವಾರ್ ಪರಿವಾರವೂ ಒಂದಾಯಿತು. ಆದರೆ, ಜನರ ತೀರ್ಪು ರಾಜಕೀಯ ತಂತ್ರಗಾರಿಕೆಗಲ್ಲ, ಅಭಿವೃದ್ಧಿಗೆ ಲಭಿಸಿತು. ಇದೇ ಮೊದಲ ಬಾರಿಗೆ ಹೆಚ್ಚು ಮಹಾನಗರಪಾಲಿಕೆಗಳಲ್ಲಿ ಗೆಲುವಿನ ನಗು ಬೀರಿರುವ ಬಿಜೆಪಿ, ಮುಂಬೈ ಮಹಾನಗರಪಾಲಿಕೆಯಲ್ಲಿ ಮೈತ್ರಿಯ ನೆರವಿನಿಂದ ಮೇಯರ್ ಸ್ಥಾನ ಅಲಂಕರಿಸಲು ಸಜ್ಜಾಗಿದೆ. ಬಿಜೆಪಿಯ ಈ ಗೆಲುವಿಗೆ ಕಾರಣವೇನು? ಶಿವಸೇನೆಯ ಠಾಕ್ರೆ ಬಣ, ಎನ್ಸಿಪಿ ಶರದ್ ಪವಾರ್ ಬಣ ಹಾಗೂ ಎನ್ಸಿಪಿ ಅಜಿತ್ ಪವಾರ್ ಬಣ ಕೆಲವೇ ಜಿಲ್ಲೆಗಳಿಗೆ ಸೀಮಿತಗೊಂಡಿದ್ದು ಹೇಗೆ? ಇಲ್ಲಿದೆ ವಿಶ್ಲೇಷಣೆ.
ಮಹಾರಾಷ್ಟ್ರಾತ ಮೋಠಾ ಭಾವುಚ ಸ್ಥಾನ ಫಕ್ತ್ ಶಿವಸೇನಾಲಾಚ್, ಆಮ್ಹಿ ತಡಜೋಡ್ ಕರಣಾರ್ ನಾಹಿ’ (ಮಹಾರಾಷ್ಟದಲ್ಲಿ ದೊಡ್ಡಣ್ಣನ ಸ್ಥಾನ ಕೇವಲ ಶಿವಸೇನೆಗೇ. ನಾವು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ) ಎಂದು ಹೇಳುವ ಮೂಲಕ 2019ರ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿ ಜತೆಗಿನ ಹಳೆಯ ಮೈತ್ರಿಯನ್ನು ಕಡಿದುಕೊಂಡ ಉದ್ಧವ್ ಠಾಕ್ರೆ ಆರೇಳು ವರ್ಷಗಳಲ್ಲೇ ಒಂದೊಂದೇ ಕೋಟೆಯನ್ನು ಕಳೆದುಕೊಂಡು, ಕೊನೆಗೆ, ದೇಶದ ವಾಣಿಜ್ಯ ರಾಜಧಾನಿ, ದೇಶದ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈಯೆಂಬ ರಾಜಕೀಯ ಕೋಟೆಯಿಂದಲೂ ಹೊರಬಿದ್ದಿದ್ದಾರೆ. ಅಂದು ಬಿಜೆಪಿಗೆ ದೊಡ್ಡಣ್ಣನ ಸ್ಥಾನ (ಮುಖ್ಯಮಂತ್ರಿ ಹುದ್ದೆ) ನೀಡಲು ನಿರಾಕರಿಸಿದ್ದ ಉದ್ಧವ್ ಮುಂಬೈ ಮೇಯರ್ ಹುದ್ದೆಯನ್ನೂ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆ ಹಲವು ಅಚ್ಚರಿಯ ಫಲಿತಾಂಶವನ್ನು ನೀಡಿದ್ದು, ಜನತೆ ಆ ಮೂಲಕ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ. ಬಿಜೆಪಿಯನ್ನು ಉತ್ತರ ಭಾರತದ ಪಕ್ಷ, ಹಿಂದೀವಾಲಾಗಳ ಪಕ್ಷ ಎಂದೇ ಹೇಳಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮರಾಠಿ ಮಾಣುಸ್ (ಮರಾಠಿ ವ್ಯಕ್ತಿ) ಅಸ್ಮಿತೆಯ ಮೇಲೆ ಚುನಾವಣೆ ಎದುರಿಸುತ್ತಿದ್ದ ಪ್ರಾದೇಶಿಕ ಪಕ್ಷಗಳೆಲ್ಲ ಈಗ ಅವಲೋಕನ ಮಾಡಿಕೊಳ್ಳುವಂಥ ಸ್ಥಿತಿ. ಇದೇ ಮೊದಲ ಬಾರಿಗೆ ಬಿಜೆಪಿ ಮಹಾರಾಷ್ಟ್ರದಾದ್ಯಂತ ವಿಸ್ತಾರವಾಗಿದೆ. ಸ್ಪಷ್ಟ ಕಾರ್ಯತಂತ್ರ, ಮೃದುಮಾತು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿನಯ, ಭರ್ಜರಿ ತಯಾರಿ ಹೀಗೆ ಹಲವು ಅಂಶಗಳ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆಲುವಿನ ಧುರಂಧರ ಆಗಿ ಹೊಮ್ಮಿದ್ದಾರೆ.
ಬಿಜೆಪಿಗೆ 2026ರ ಮೊದಲ ಗೆಲುವಿನ ಸಿಹಿ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಮೂಲಕ ದೊರೆತಿದೆ. ಇದೇ ವರ್ಷದಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ಉತ್ಸಾಹ ತುಂಬಿದ್ದರೆ, ಐಎನ್ಡಿಐಎ ಒಕ್ಕೂಟ ಮೈತ್ರಿಕೂಟದ ಲೆಕ್ಕಾಚಾರಗಳನ್ನು ಮರು ಪರಿಶೀಲಿಸಿ, ಮರುವಿನ್ಯಾಸಗೊಳಿಸುವ ಸಮಯ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುವುದಂತೂ ಹೌದು.
ಗೆಲುವಿನ ಅಲೆ
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ), ನವಿ ಮುಂಬೈ, ಪುಣೆ, ನಾಗಪುರ, ಪಿಂಪರಿ-ಚಿಂಚವಾಡ್, ನಾಸಿಕ್, ಠಾಣೆ, ಇಚಲಕರಂಜಿ, ಜಾಲ್ನಾ, ಕಲ್ಯಾಣ-ಡೊಂಬಿವಲಿ, ಛತ್ರಪತಿ ಸಂಭಾಜಿ ನಗರ (ಔರಂಗಾಬಾದ್), ಸೋಲಾಪುರ, ಕೋಲ್ಹಾಪುರ, ಜಲಗಾಂವ್, ಧುಲೆ, ನಾಂದೇಡ್ನಂಥ ಪ್ರಮುಖ ಮಹಾನಗರ ಪಾಲಿಕೆಗಳು ಬಿಜೆಪಿ ಪಾಲಾಗಿವೆ. ವಿದರ್ಭ, ಪಶ್ಚಿಮ ಮಹಾರಾಷ್ಟ್ರ, ಕೊಂಕಣ್ ಸೇರಿದಂತೆ ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಈಗ ಬಿಜೆಪಿಯ ಮೇಯರ್ಗಳು ಆಳ್ವಿಕೆ ನಡೆಸಲಿದ್ದು, ರಾಜ್ಯದ ಇತಿಹಾಸದಲ್ಲೇ ಬಿಜೆಪಿ ಇಷ್ಟೊಂದು ಮಹಾನಗರಪಾಲಿಕೆಗಳಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದೆ. ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಪೈಕಿ 17ರಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ, ಎಂಟು ಮಹಾನಗರ ಪಾಲಿಕೆಗಳಲ್ಲಿ ಮೈತ್ರಿಪಕ್ಷಗಳ ನೆರವಿನೊಂದಿಗೆ ಮೇಯರ್ ಸ್ಥಾನ ಏರಲಿದೆ. ಅಂದರೆ, 29ರಲ್ಲಿ 25 ಮಹಾನಗರಪಾಲಿಕೆಗಳು ಬಿಜೆಪಿ ಮೈತ್ರಿಕೂಟಕ್ಕೆ ಒಲಿದಿವೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ವೈಶಿಷ್ಟ್ಯಗಳು
- ಏಷ್ಯಾದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆ.
- ಕಳೆದ 10 ವರ್ಷಗಳಲ್ಲಿ ಮುಂಬೈ ಅಭಿವೃದ್ಧಿಗೆ ಬಿಎಂಸಿ ನೀಡಿರುವ ಅನುದಾನ 2.19 ಲಕ್ಷ ಕೋಟಿ ರೂ.
- ಬಿಎಂಸಿಯ 2025-26ರ ಬಜೆಟ್ 74,427 ಕೋಟಿ ರೂ. ಇದು ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಗೋವಾದಂಥ ರಾಜ್ಯಗಳ ಬಜೆಟ್ಗಿಂತಲೂ ಹೆಚ್ಚು.
- ಬಿಎಂಸಿ ಚುನಾವಣೆ 2022ರಲ್ಲೇ ನಡೆಯಬೇಕಿತ್ತು. ಆದರೆ, ಕರೊನಾ ಸಾಂಕ್ರಾಮಿಕ ಕಾಯಿಲೆಯ ಹಾವಳಿ, ನಂತರದ ದಿನಗಳಲ್ಲಿ ಮರಾಠಾ ಮೀಸಲಾತಿ ಹೋರಾಟ ಭುಗಿಲೆದ್ದ ಪರಿಣಾಮ ಚುನಾವಣೆ ಮುಂದೂಡುತ್ತ 2026ರ ಜನವರಿಯಲ್ಲಿ ಸಂಪನ್ನಗೊಂಡಿತು.
- ಬಿಎಂಸಿಯ ಮೇಯರ್ ಹುದ್ದೆ ಕಳೆದ 26 ವರ್ಷಗಳಿಂದ ಶಿವಸೇನೆಯ ಬಳಿ ಇತ್ತು. ದೀರ್ಘಾವಧಿಯ ಬಳಿಕ ಈ ಮಾನ್ಯತೆಯನ್ನು ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಪಕ್ಷವನ್ನು ಮತ್ತೆ ಶೂನ್ಯದಿಂದಲೇ ಕಟ್ಟಬೇಕಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿ ಇದೇ ಮೊದಲ ಬಾರಿಗೆ ಬಿಎಂಸಿ ಮೇಯರ್ ಹುದ್ದೆ ಅಲಂಕರಿಸಲಿದೆ.
ಬಿಜೆಪಿಯ ಭರ್ಜರಿ ಸಿದ್ಧತೆ
2019ರ ಅಕ್ಟೋಬರ್ 24. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನ. ಬಿಜೆಪಿ ಸ್ಪಷ್ಟ ಬಹುಮತ ಪಡೆಯದಿದ್ದರೂ 105 ಸ್ಥಾನಗಳನ್ನು ಗೆಲ್ಲುವ ಮೂಲಕ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮೈತ್ರಿಪಕ್ಷ ಶಿವಸೇನಾ ಗೆದ್ದಿದ್ದು 56 ಸ್ಥಾನ. ದೇವೇಂದ್ರ ಫಡ್ನವೀಸ್ರನ್ನು ಮುಖ್ಯಮಂತ್ರಿಯಾಗಿಸಲು ಬಿಜೆಪಿ ಉನ್ನತ ನಾಯಕತ್ವ ನಿರ್ಧರಿಸಿತ್ತು. ಆದರೆ, ಅದೇ ಸಮಯದಲ್ಲಿ ಉದ್ಧವ್ ಠಾಕ್ರೆ ತಾನೇ ಸಿಎಂ ಆಗಬೇಕು ಎಂದು ಪಟ್ಟುಹಿಡಿದು, ಬಿಜೆಪಿ ಜತೆಗಿನ ಮೈತ್ರಿಯನ್ನು ಅಂತ್ಯಗೊಳಿಸಿದರು. ಮಾತ್ರವಲ್ಲ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ ಜತೆಗೇ ಮೈತ್ರಿ ಮಾಡಿಕೊಂಡು ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಮೈತ್ರಿದ್ರೋಹದಿಂದ ಪಾಠ ಕಲಿತ ರಾಜ್ಯ ಬಿಜೆಪಿ ನಾಯಕರು ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ತೀವ್ರಗೊಳಿಸಲು ಆಗಲೇ ನಿರ್ಧರಿಸಿದರು. ಹಾಗಾಗಿ, 2026ರ ಗೆಲುವು ಬಿಜೆಪಿ ಪಾಲಿಗೆ ಆಕಸ್ಮಿಕವಲ್ಲ. ಇದರ ಹಿಂದೆ ಆರು ವರ್ಷಗಳ ಸಂಘಟನಾ ಪ್ರಯತ್ನಗಳಿವೆ ಎಂಬುದನ್ನು ಚುನಾವಣೆ ರಣತಂತ್ರ ರೂಪಿಸುವ ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಯ ಹೊತ್ತಲ್ಲಿ ಬಿಜೆಪಿ ಕೊಂಚ ಹಿನ್ನಡೆ ಅನುಭವಿಸಿದರೂ, ಸೋಲಿಗೆ ಅವಲೋಕನ ನಡೆಸಿ, ತಪ್ಪುಗಳನ್ನು ತಿದ್ದಿಕೊಂಡಿದೆ.
ಕುಂದಿದ ಪವಾರ್ ಪವರ್
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಸಹಕಾರಿ ಕ್ಷೇತ್ರದ ನಾಯಕರು. ಸ್ಥಳೀಯ ಮಟ್ಟದಲ್ಲಿಯೇ ಪಕ್ಷದ ಬೇರುಗಳನ್ನು ವಿಸ್ತರಿಸಿದವರು. ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೀಡಿದ ಸ್ಥಾನಗಳಿಗೆ ತೃಪ್ತಿಯಾಗದ್ದರಿಂದ, ಪ್ರತ್ಯೇಕವಾಗಿ ಪವಾರ್ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಭಾರಿ ಹಿನ್ನಡೆ ಕಂಡಿರುವುದು, ಪವಾರ್ ವರ್ಚಸ್ಸು ಕುಂದಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ವಿರುದ್ಧವೇ ಬಾರಾಮತಿ ಕ್ಷೇತ್ರದಲ್ಲಿ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕೆ ಇಳಿಸಿದ್ದ ಅಜಿತ್ ಅಲ್ಲಿಯೂ ಮುಖಭಂಗ ಅನುಭವಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನು ಕೆಲವೇ ದಿನ ಇರುವಾಗ ಕೇವಲ ರಾಜಕೀಯ ಲಾಭಕ್ಕಾಗಿ ಅಜಿತ್, ಶರದ್ ಪವಾರ್ ಜತೆ ಒಟ್ಟಾಗಿದ್ದನ್ನು ಜನರು ಮನಸಾರೆ ಒಪ್ಪಿಕೊಂಡಿಲ್ಲ ಎಂಬುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಕೊನೆಯ ಕ್ಷಣದಲ್ಲಿ ಅಜಿತ್, ಶರದ್ ಪವಾರ್ ಜತೆ ಕೈಜೋಡಿಸಿದ್ದು ಬಿಜೆಪಿಯ ಅಸಮಾಧಾನಕ್ಕೂ ಕಾರಣವಾಗಿತ್ತು.
ಒಂದೇಒಂದು ಮೇಯರ್ ಸ್ಥಾನ ಎನ್ಸಿಪಿ ಅಜಿತ್ ಬಣಕ್ಕೆ ಒಲಿದಿಲ್ಲ. ಇತ್ತ ಬಿಜೆಪಿಯೂ ಪೂರ್ಣ ಮನಸ್ಸಿನಿಂದ ಈಗ ಅಜಿತ್ ಪವಾರ್ರನ್ನು ಒಪ್ಪಿಕೊಳ್ಳುವುದಿಲ್ಲ, ಶರದ್ ಪವಾರ್ ಜತೆಗಿನ ಮೈತ್ರಿಯೂ ಮುಂದುವರಿಯುವುದು ಕಷ್ಟ. ಹೀಗಾಗಿ, ಪ್ರಸಕ್ತ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ಅಜಿತ್ ರಾಜಕೀಯಕವಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದ್ದು, ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ಫಲಿತಾಂಶದ ವೈಶಿಷ್ಟ್ಯಗಳು
- ಉದ್ಧವ್ ಠಾಕ್ರೆ ಬಣದ ಶಿವಸೇನೆ ಮುಂಬೈಗೆ ಸೀಮಿತವಾಗಿ ಉಳಿದಿದೆ.
- ಏಕನಾಥ್ ಶಿಂಧೆ ಬಣದ ಶಿವಸೇನೆ ಥಾಣೆಯಲ್ಲಿ ಗೆಲುವು ಸಾಧಿಸಿದ್ದರೂ, ಉಳಿದೆಡೆ ಹೇಳಿಕೊಳ್ಳುವಂಥ ಸಾಧನೆ ತೋರಿಲ್ಲ.
- ಬಿಜೆಪಿ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ಬಹುತೇಕ ಕಡೆ ಉತ್ತಮ ಸ್ಥಾನ ಗಳಿಸಿರುವುದು ಈ ನಿರ್ಧಾರಕ್ಕೆ ಕಾರಣ. ಅಲ್ಲದೆ, ಮಹಾರಾಷ್ಟ್ರ ರಾಜಕಾರಣದಲ್ಲಿ ದೇವೇಂದ್ರ ಫಡ್ನವೀಸ್ ವರ್ಚಸ್ಸು ಹೆಚ್ಚಿದೆ.
- ರಾಜ್ ಠಾಕ್ರೆ ಭಾಷಣ ಕೇಳಲು ಜನ ಬರುತ್ತಾರೆ, ಆದರೆ ಅವರು ಮತ ಹಾಕುವುದಿಲ್ಲ ಎಂಬುದು ಈ ಚುನಾವಣೆಯಲ್ಲೂ ಸ್ಪಷ್ಟಗೊಂಡಿದೆ. ಉದ್ಧವ್ ಜತೆಗಿನ ರಾಜ್ ಠಾಕ್ರೆ ಸಖ್ಯ ಮುಂದುವರಿಯುವುದು ಅನುಮಾನ.
- ಮುಂಬೈಯಲ್ಲೇ ಎರಡನೇ ಪಕ್ಷವಾಗಿ ಹಿಂಬಡ್ತಿ ಪಡೆದಿರುವ ಉದ್ಧವ್ ಮುಂದಿನ ತಂತ್ರಗಾರಿಕೆ ಏನಿರಲಿದೆ ಎಂಬುದು ಕುತೂಹಲಕರ. ಅಲ್ಲದೆ, ಶಿವಸೇನೆಯ ದಾರುಣ ಸೋಲಿಗೆ ಆ ಪಕ್ಷದ ನಾಯಕ ಸಂಜಯ್ ರಾವತ್ ವಿವಾದಾತ್ಮಕ ಹೇಳಿಕೆಗಳು ಪ್ರಮುಖ ಕಾರಣ ಎಂದು ಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.